ಭಾಷಾ ವಿಜ್ಞಾನ

ಭಾಷೆಯನ್ನು ಕುರಿತಾದ ವೈಜ್ಞಾನಿಕ ಅಧ್ಯಯನ (ಲಿಂಗ್ವಿಸ್ಟಿಕ್ಸ್). ಭಾಷೆಗೆ ಸಂಬಂಧಿಸಿದ ಬಾಹ್ಯ ಮತ್ತು ಆಂತರಿಕ ವಿಚಾರಗಳನ್ನು ವಿವೇಚಿಸಲು ಭಾಷಾವಿಜ್ಞಾನ ಸಹಾಯಕವಾಗುತ್ತದೆ. ಭಾಷೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಪಡೆಯುವುದೇ ಭಾಷಾವಿಜ್ಞಾನದ ಗುರಿಯಾದ್ದರಿಂದ ಪ್ರಪಂಚದಲ್ಲಿ ಹಿಂದೆ ಬಳಕೆಯಲ್ಲಿದ್ದ ಈಗ ಬಳಕೆಯಲ್ಲಿರುವ ಎಲ್ಲ ಭಾಷೆ ಉಪಭಾಷೆಗಳು ಅದರ ಅಧ್ಯಯನ ವ್ಯಾಪ್ತಿಗೆ ಸೇರುತ್ತವೆ. ನಾಗರೀಕತೆಯಲ್ಲಿ ಮುಂದುವರಿದವರ ಹಾಗೂ ಹಿಂದುಳಿದವರ ಭಾಷೆಗಳೆಲ್ಲವನ್ನೂ ಮುಖ್ಯಾಮುಖ್ಯವೆಂದು ಭೇದಮಾಡದೆ ಭಾಷಾವಿಜ್ಞಾನಿ ಪರಿವೀಕ್ಷಣೆ ನಡೆಸುತ್ತಾನೆ. ಆಡುಭಾಷೆಗಳ ಬಗ್ಗೆ ವಿಶೇಷ ಆಸಕ್ತಿ ತಳೆದರೂ ಗ್ರಂಥಸ್ಥಭಾಷೆಗಳನ್ನೂ ಶ್ರದ್ಧೆಯಿಂದ ವಿಶ್ಲೇಷಿಸುತ್ತಾನೆ. ಪ್ರಾಣಿವರ್ಗದಿಂದ ಮಾನವನನ್ನು ಪ್ರತ್ಯೇಕಿಸಲು ಇರುವ ಸಾಧನಗಳಲ್ಲಿ ಭಾಷೆಯೇ ಪ್ರಧಾನ. ಇದನ್ನು ಅಭ್ಯಸಿಸುವುದರಲ್ಲಿ ವಿಶ್ಲೇಷಿಸುವುದರಲ್ಲಿ ಇತರ ಅಧ್ಯಯನ ಶಾಖೆಗಳಿಗಿಂತಲೂ ಭಾಷಾವಿಜ್ಞಾನದ ಸ್ಥಾನ ಹೆಚ್ಚಿನದು. ಆಧುನಿಕ ವಿಜ್ಞಾನಿಗಳಿಂದ ಅಭ್ಯಸಿಸಲ್ಪಡುತ್ತಿರುವ ವಿವಿಧ ಅಧ್ಯಯನ ಶಾಖೆಗಳಲ್ಲಿ ಭಾಷಾವಿಜ್ಞಾನವೇ ಕಿರಿಯ ಶಾಖೆಯಾದರೂ ಇದರ ಇತಿಹಾಸ ಅನೇಕ ಶತಮಾನಗಳ ವ್ಯಾಪ್ತಿ ಪಡೆದಿದೆ.

	ಪ್ರಸ್ತುತ ಲೇಖನದಲ್ಲಿ ಭಾಷಾವಿಜ್ಞಾನದ ಇತಿಹಾಸ, ಸಾಮಾನ್ಯ ಭಾಷಾವಿಜ್ಞಾನ, ಅನ್ವಿತ ಭಾಷಾವಿಜ್ಞಾನ ಮತ್ತು ಭಾಷಾವಿಜ್ಞಾನದ ಉಪಯೋಗಗಳನ್ನು ಕುರಿತು ವಿವರಣೆ ನೀಡಲು ಯತ್ನಿಸಲಾಗಿದೆ.

	ಭಾಷಾವಿಜ್ಞಾನದ ಇತಿಹಾಸ : (i) ಪ್ರಾಚೀನ ಕಾಲ: ಪಶ್ಚಿಮ ದೇಶಗಳಲ್ಲಿ ಭಾಷಾಧ್ಯಯನ ಆರಂಭವಾದದ್ದು ಗ್ರೀಕರಿಂದ. ಭಾಷೆಯ ಉಗಮ, ವಿಕಾಸ, ರಚನೆ ಮುಂತಾದ ವಿಷಯಕುರಿತು ಅವರು ಆಲೋಚಿಸಿದರು. ಗ್ರೀಕ್ ವಿದ್ವಾಂಸರಿಗೆ ಗ್ರೀಕ್ ಒಂದೇ ನೈಜ ಭಾಷೆ. ಉಳಿದ ಭಾಷೆಗಳನ್ನು 'ಬಾರ್ಬರಿ' ಎಂದು ಕರೆದರು. ಅವರು ತಮ್ಮ ಭಾಷೆಗೆ ಹೊರತಾದ ಯಾವ ಭಾಷೆಯನ್ನೂ ಅಧ್ಯಯನ ಮಾಡಲಿಲ್ಲ. ಗ್ರೀಕ್ ಭಾಷೆಯೇ ಪ್ರಪಂಚದ ಎಲ್ಲ ಭಾಷೆಗಳ ವೈಲಕ್ಷಣ್ಯಗಳನ್ನು ಪಡೆದಿದೆ ಎಂದು ನಂಬಿದ್ದರು. ತಮ್ಮ ಭಾಷೆಗೆ ವ್ಯಾಕರಣ ನಿಯಮಗಳನ್ನು ಮಾಡಿ ಅವೇ ಸಾರ್ವತ್ರಿಕ ನಿಯಮಗಳೆಂದು (ಯೂನಿವರ್ಸಲ್ ಲಾ) ಪ್ರಚುರ ಪಡಿಸಲು ಯತ್ನಿಸಿದರು.

	ಪದಗಳು ಯೌಗಿಕವೇ ರೂಢಿಮೂಲವೇ ಎಂಬುದು ಗ್ರೀಕ್ ತಾತ್ತ್ವಿಕರಿಗೆ ಪ್ರಿಯವಾಗಿದ್ದ ಭಾಷೆಯ ಬಗೆಗಿನ ಬಲು ಮುಖ್ಯ ಸಮಸ್ಯೆ. ಈ ವಿಷಯದಲ್ಲಿ ಅಲ್ಲಿಯ ತತ್ತ್ವಶಾಸ್ತ್ರಜ್ಞರಲ್ಲಿ ಬೇಕಾದಷ್ಟು ಚರ್ಚೆ ನಡೆದಿದೆ. ಪ್ಲೇಟೋವಿನ (ಕ್ರಿ. ಪೂ. 428-348) 'ಕ್ರತಿಲೊಸ್ ಎಂಬ ಕೃತಿಯಲ್ಲೂ ಇದನ್ನು ಕಾಣಬಹುದು. ಅರಿಸ್ಟಾಟಲ್ (ಕ್ರಿ. ಪೂ. 384-322) ಗ್ರೀಕ್ ಭಾಷೆಯ ಪದಗಳನ್ನು ನಾಮ, ಆಖ್ಯಾತ ಮತ್ತು ಸಂಯೋಜಕವೆಂದು ಮೂರು ಬಗೆಯಲ್ಲಿ ವರ್ಗೀಕರಿಸಿದ್ದಾನೆ. ಜೋನೋ (ಕ್ರಿ. ಪೂ. ಸು. 300) ಅರಿಸ್ಟಾಟಲ್ ವರ್ಗೀಕರಿಸಿರುವ ಗುಂಪಿಗೆ ನಿಪಾತವೆಂಬ ನಾಲ್ಕನೆಯ ವರ್ಗವನ್ನು ಸೇರಿಸಿದ. ನಿಪಾತಗಳೆಂದರೆ ನಾಮಪದ ಮತ್ತು ಕ್ರಿಯಾಪದ ಈ ಎರಡರ ಲಕ್ಷಣಗಳಿಂದ ಕೂಡಿದಂಥವು. ಅನಂತರ ಬಂದ ಡಯೋನಿಸಿಯುಸ್ (ಕ್ರಿ. ಪೂ.ಸು. 120) ಎಂಬವ ಸಂಯೋಜಕ ವರ್ಗವನ್ನು ತೆಗೆದು ಹಾಕಿ ಕ್ರಿಯಾವಿಶೇಷಣ, ಉಪಸರ್ಗ ಮತ್ತು ಸಂಯೋಗಾವ್ಯಯಗಳನ್ನು ಸೇರಿಸಿದ. ಸರ್ವನಾಮವನ್ನು ನಾಮಪದದಿಂದ ಪ್ರತ್ಯೇಕಿಸಿದ. ರೋಮನರೂ ಇದೇ ರೀತಿಯ ಗ್ರೀಕ್ ವ್ಯಾಕರಣ ಪದ್ಧತಿಯನ್ನು ಅನುಸರಿಸುತ್ತ ಹೋದರು.

	ಈ ಕಾಲದಲ್ಲಿ ಭಾರತದ ಸ್ಥಿತಿ ಬೇರೆಯೇ ಆಗಿತ್ತು. ಭಾಷೆಯ ವಿಶ್ಲೇಷಣೆ ಕುರಿತಾದ ಕೃತಿಗೆ ವ್ಯಾಕರಣ ಎಂಬ ಪದ ಬಳಕೆಯಾಯಿತು. ಈ ರೀತಿಯ ಕೃತಿಗಳಲ್ಲಿ ಕ್ರಿ. ಪೂ. ಸುಮಾರು ಐದನೆಯ ಶತಮಾನದಲ್ಲಿ ಪಾಣಿನಿಯಿಂದ ರಚಿತವಾದ ಅಷ್ಟಾಧ್ಯಾಯೀ ಎಂಬ ಹೆಸರಿನ ಸಂಸ್ಕøತ ವ್ಯಾಕರಣ ಗ್ರಂಥ ಅತಿಮುಖ್ಯವಾದದ್ದು. ಅದು ವ್ಯಾಖ್ಯಾನದ ಸಹಾಯವಿಲ್ಲದೆ ಸುಲಭವಾಗಿ ಅರ್ಥವಾಗದ ಸೂತ್ರ ಶೈಲಿಯಲ್ಲಿದ್ದರೂ ಪ್ರಪಂಚದ ಯಾವುದೇ ಭಾಷೆಯಲ್ಲಿ ಅಷ್ಟು ಪೂರ್ಣವಾದ ಮತ್ತು ಸಮರ್ಪಕವಾದ ವ್ಯಾಕರಣರಚನೆಯಾಗಿಲ್ಲ. ಪಾಶ್ಚಾತ್ಯ ವ್ಯಾಕರಣಶಾಸ್ತ್ರಗಳ ಅಧ್ಯಯನದಲ್ಲಿ, ವಿಶ್ಲೇಷಣೆಯಲ್ಲಿ ಈಚೀಚೆಗೆ ತೋರಿಬರುತ್ತಿರುವ ಲಕ್ಷಣಗಳು ಪಾಣಿನಿಯ ವ್ಯಾಕರಣದಲ್ಲಿ ಕಂಡುಬರುತ್ತವೆ.

	(ii) ಮಧ್ಯಕಾಲ : ಪ್ರಪಂಚದ ಭಾಷೆಗಳಿಗೆಲ್ಲ ಹೀಬ್ರೂ ಭಾಷೆಯೇ ಮೂಲ ಎನ್ನುವ ನಂಬಿಕೆಯನ್ನು 17ನೆಯ ಶತಮಾನದಲ್ಲಿ ಲೀಬ್‍ನಿeóï ಎಂಬ ಜರ್ಮನ್ ಪಂಡಿತ ತೀವ್ರವಾಗಿ ವಿರೋಧಿಸಿ ಭಾಷೆಗಳಿಗೆ ತಮ್ಮವೇ ಆದ ವ್ಯಾಕರಣ, ಕೋಶಗಳ ರಚನೆಯನ್ನು ಪ್ರೋತ್ಸಾಹಿಸಿದ. ಇದರಿಂದಾಗಿ 18ನೆಯ ಶತಮಾನದಲ್ಲಿ ಹಲವಾರು ಭಾಷೆಗಳ ಬಗ್ಗೆ ತಿಳಿವಳಿಕೆ ಕೊಡುವ ಎರಡು ಗ್ರಂಥಗಳು ಹೊರಬಂದುವು. ಮೊದಲನೆಯದು ಪೆಲ್ಲಾಸ್ ಎಂಬ ವಿದ್ವಾಂಸನ ಸಂಗ್ರಹ ಕೃತಿ. ಇದು ಸುಮಾರು 200 ಭಾಷೆಗಳ ಶಬ್ದಗಳು ಮತ್ತು ಸಾಹಿತ್ಯದ ತುಣುಕುಗಳಿಂದ ಕೂಡಿದೆ. ಎರಡನೆಯದು ಆಡೆಲುಂಗ್ ಎಂಬಾತನ ಬೈಬಲ್ ಸೂತ್ರಗಳಿಂದ ಕೂಡಿದ ಗ್ರಂಥ.

	(iii) ತುಲನಾತ್ಮಕ ವ್ಯಾಕರಣ : 1786 ಫೆಬ್ರುವರಿ 2ರಂದು ಬಂಗಾಲದ ಏಷ್ಯಾಟಿಕ್ ಸಂಸ್ಥೆಯ ಆಶ್ರಯದಲ್ಲಿ ಭಾಷಣ ಮಾಡಿದ ಸರ್ ವಿಲಿಯಮ್ ಜೋನ್ಸ್ ತುಲನಾತ್ಮಕ ವ್ಯಾಕರಣಕ್ಕೆ ಕಾರಣಪುರುಷ ಎನ್ನಬಹುದು. ತಮ್ಮ ಭಾಷಣದಲ್ಲಿ ಅವರು ಸಂಸ್ಕøತಕ್ಕೂ ಯೂರೋಪಿನ ಕೆಲವುಭಾಷೆಗಳಿಗೂ ನಿಕಟ ಸಂಬಂಧವಿದೆಯೆಂದೂ ಅವುಗಳೆಲ್ಲ ಒಂದೇ ಪರಿವಾರಕ್ಕೆ ಸೇರಿದ ಭಾಷೆಗಳೆಂದೂ ಹೇಳಿದರು. ಈ ಭಾಷಣದಿಂದ ಪ್ರಭಾವಿತರಾದ ಜರ್ಮನ್ ಮತ್ತು ಇಂಗ್ಲಿಷ್ ವಿದ್ವಾಂಸರು ಸಂಸ್ಕøತ ಭಾಷೆಯ ಅಧ್ಯಯನದಲ್ಲಿ ತೊಡಗಿದರು. ಯೂರೋಪಿನ ಭಾಷೆಗಳಲ್ಲಿ ನಿಷ್ಣಾತರಾದ ಅವರು ತಮ್ಮ ಭಾಷೆಗಳನ್ನು ಸಂಸ್ಕøತದೊಡನೆ ಹೋಲಿಸಿ ಅವುಗಳ ಸಂಬಂಧವನ್ನು ಪರಿಚಯಮಾಡಿಕೊಡಲು ತೊಡಗಿದರು. ಜೇಕಬ್ ಗ್ರಿಮ್ ಎಂಬ ವಿದ್ವಾಂಸ ತನ್ನ ಜರ್ಮನ್ ಭಾಷೆಯ ವ್ಯಾಕರಣದಲ್ಲಿ (1819) ಜರ್ಮನ್ ಭಾಷೆಯಲ್ಲಿಯ ವ್ಯಂಜನಧ್ವನಿಗಳಿಗೂ ಸಂಸ್ಕøತ. ಲ್ಯಾಟಿನ್, ಗ್ರೀಕ್ ಭಾಷೆಗಳ ವ್ಯಂಜನ ಧ್ವನಿಗಳಿಗೂ ಸಾದೃಶ್ಯವಿದೆಯೆಂದು ತೋರಿಸಿಕೊಟ್ಟ. ಈ ಸಾದೃಶ್ಯ ಸೂಚಕ ವಚನಕ್ಕೆ ಧ್ವನಿಸೂತ್ರವೆಂದು ಹೆಸರು. ಗ್ರಿಮ್‍ಗಿಂತ ಒಂದು ವರ್ಷಮೊದಲೇ ಡೆನ್ಮಾರ್ಕಿನ ರಾಸ್‍ಮಸ್ ರಾಸ್ಕ್ ಎಂಬಾತ ಈ ಸಾದೃಶ್ಯ ಗಮನಿಸಿದ್ದರೂ ಡೇನಿಷ್ ಭಾಷೆಯಲ್ಲಿದ್ದ ಅವನ ಲೇಖನ ಯಾರ ಗಮನಕ್ಕೂ ಬಂದಿರಲಿಲ್ಲ. ಹಾಗಾಗಿ ಧ್ವನಿಸೂತ್ರಗಳ ಕಲ್ಪನೆಗೆ ಗ್ರಿಮ್ ವಿದ್ವಾಂಸನೇ ಮೊದಲಿಗ ಎನ್ನುತ್ತಾರೆ.

	ಈ ಕಾಲದ ಅಧ್ಯಯನದಲ್ಲಿ ಎರಡು ಮುಖ್ಯ ಲಕ್ಷಣಗಳನ್ನು ಗಮನಿಸಬಹುದು; ಮೊದಲನೆಯದಾಗಿ ಶಾಸ್ತ್ರದ ಬೆಳೆವಣಿಗೆಯಾಗಬೇಕಾದರೆ ಹಿಂದಿನವರ ಅಧ್ಯಯನ ಸಿದ್ಧಾಂತಗಳನ್ನು ಬಳಸಿಕೊಂಡು ವಿಶ್ಲೇಷಣೆ ನಡೆಸಬೇಕು ಎಂಬ ನಂಬಿಕೆಯಲ್ಲಿ ವಿದ್ವಾಂಸರು ಮುಂದುವರಿದದ್ದು; ಎರಡನೆಯದಾಗಿ ವ್ಯಕ್ತಿಗತ ಆಧಾರರಹಿತ ನಂಬಿಕೆಗಳಿಗೆ ಅವಕಾಶ ಕೊಡದೆ, ವಿದ್ವಾಂಸನೊಬ್ಬನ ಸಿದ್ಧಾಂತವನ್ನು ಇತರರೂ ವಿವೇಚಿಸಿ ಸರಿಯೆಂದು ಕಂಡುಕೊಳ್ಳಲು ಪ್ರಯತ್ನಪಟ್ಟದ್ದು. ಇದರಿಂದ ಮುಖ್ಯವಾಗಿ ಇಂಡೊಯೂರೊಪಿಯನ್ ಭಾಷಾಪರಿವಾರದ ಕಲ್ಪನೆ, ತುಲನಾತ್ಮಕ ವ್ಯಾಕರಣ ವಿಧಾನ, ಎಲ್ಲಕ್ಕೂ ಮಿಗಿಲಾಗಿ ಭಾಷೆಯಲ್ಲಿ ಧ್ವನಿಸೂತ್ರಗಳು ನಿಯಮಬದ್ಧವಾಗಿರುವುವೆಂಬ ತಿಳಿವಳಿಕೆಯುಂಟಾಯಿತು. ಸ್ಲೆಯ್‍ಖರೆ ಎಂಬ ವಿದ್ವಾಂಸ ಈ ಭಾಷಾಪರಿವಾರಕ್ಕೆ ಸೇರಿದ ಭಾಷೆಗಳ ನಡುವಣ ಸಂಬಂಧವನ್ನು ವೃಕ್ಷವೊಂದರ ಶಾಖೆಗಳ ಸಂಬಂಧಕ್ಕೆ ಹೋಲಿಸಿದ. ಅನಂತರ ಬಂದ ಸ್ಮಿತ್ ಎಂಬ ವಿದ್ವಾಂಸ ಈ ಸಂಬಂಧವನ್ನು ಅಲೆಗಳಿಗೆ ಹೋಲಿಸಿ ಭಾಷೆಗಳು ಅಲೆಗಳಂತೆ ಒಂದೇ ಮೂಲದಿಂದ ಬೆಳೆದುಬಂದುವೆಂದು ತೋರಿಸಿಕೊಟ್ಟ. ಜರ್ಮನ್ ವೇದಾಂತಿ ವಿಲ್‍ಹೆಲ್ಮ್ ಹಮ್‍ಬೋಲ್ಟ್ (1767-1835) ಪ್ರತಿಭಾಷೆಗೂ ತನ್ನದೇ ಆದ ರಚನೆ ಇರುವುದೆಂದೂ ಅವುಗಳ ನಡುವಣ ಭೇದ ಅವುಗಳನ್ನಾಡುವ ಜನರ ಸಂಸ್ಕøತಿ ಹಾಗೂ ಪ್ರತ್ಯೇಕತೆಗಳನ್ನು ಪ್ರತಿಬಿಂಬಿಸುವುದೆಂದೂ ಆದ್ದರಿಂದ ಇತರ ಭಾಷೆಗಳೊಡನೆ ಹೋಲಿಸದೆ ಪ್ರತಿಭಾಷೆಯನ್ನೂ ವಿಶ್ಲೇಷಿಸಬೇಕೆಂದೂ ವಿವರಿಸಬೇಕೆಂದೂ ವಾದಿಸಿದ.

	(iv) ಯುವವೈಯಾಕರಣರು : 1870-1925. 19ನೆಯ ಶತಮಾನದ ಉತ್ತರಾರ್ಧದಲ್ಲಿ ಕೆಲವು ಭಾಷಾವಿಜ್ಞಾನಿಗಳು ಧ್ವನಿವ್ಯತ್ಯಾಸಗಳ ಕ್ರಮಬದ್ಧತೆಯನ್ನು ಒಂದು ತತ್ತ್ವವೆಂಬಂತೆ ಪ್ರತಿಪಾದಿಸಿದರು. 1870ರಲ್ಲಿ ಆಗಸ್ಟ್ ಲೆಸ್ಕಿಯೆನ್ ಎಂಬಾತ ಧ್ವನಿನಿಯಮಗಳಿಗೆ ಅಪವಾದಗಳೇ ಇಲ್ಲ ಎಂದು ಘೋಷಿಸಿದ. ಅವನನ್ನೂ ಅವನ ತಂಡದ ಇತರರನ್ನೂ (ಬ್ರುಗ್‍ಮನ್, ಒಸ್ತೊಫ್, ಪಾಲ್ ಮುಂತಾದವರು) ಯುವವೈಯಾಕರಣರೆಂದು ಕರೆದು ಹಾಸ್ಯಮಾಡಿದರು ಧ್ವನಿವ್ಯತ್ಯಾಸಗಳು ಒಂದು ನಿರ್ದಿಷ್ಟ ಕ್ರಮ ಅನುಸರಿಸುತ್ತವೆ; ಧ್ವನಿನಿಯಮಗಳಿಗೆ ಅಪವಾದಗಳೇ ಇಲ್ಲ-ಎಂದು ಈ ನವವೈಯಾಕರಣರು ಪ್ರತಿಪಾದಿಸಿದ್ದರಿಂದ ಅನೇಕ ವಿದ್ವಾಂಸರ ಉಗ್ರಟೀಕೆಗೆ ಗುರಿಯಾಗಬೇಕಾಯಿತು. ಈ ಕಾಲದಲ್ಲಿ ಮುಖ್ಯವಾಗಿ ಧ್ವನಿಶಾಸ್ತ್ರದ ಅಧ್ಯಯನ ಮುಂದುವರಿಯಿತೆನ್ನಬಹುದು. ಭಾಷೆಯಲ್ಲಿ ತೋರಿಬರುವ ಧ್ವನಿಪರಿಣಾಮಗಳ ವಿವರಣೆ ಹಾಗೂ ಭಾಷಾವರ್ಗೀಕರಣ ಬೆಳೆದುವು. ಭಾಷೆಯಲ್ಲಿ ಹೇಗೋ ಉಪಭಾಷೆಗಳಲ್ಲೂ ಹಾಗೆ ಧ್ವನಿನಿಯಮಗಳು ನಡೆಯುತ್ತವೆಂಬುದನ್ನು ತೋರಿಸಲು ಅನೇಕ ಭಾಷೆ ಉಪಭಾಷೆಗಳನ್ನು ಕುರಿತಾದ ಅಧ್ಯಯನ ಈ ಕಾಲದಲ್ಲಿ ವಿಶೇಷವಾಗಿ ನಡೆಯಿತು. ಚಾರಿತ್ರಿಕ ಪರಿಸ್ಥಿತಿಗಳಿಂದಾಗಿ ಉಪಭಾಷೆಗಳು ಉಗಮಗೊಳ್ಳುವುವೆಂದೂ ಅವುಗಳಲ್ಲೇ ಒಂದು ಸಾಹಿತ್ಯಕ ಭಾಷೆಯಾಗಿ ಪರಿಗಣಿಸಲ್ಪಡುವುದೆಂದೂ ಭಾಷಾವಿಜ್ಞಾನಿಗಳು ಅರಿತುಕೊಂಡರು.

	(v) ನಿರ್ಮಾಣವಾದ : ಭಾಷೆಯಲ್ಲಿ ಧ್ವನಿರಚನೆ, ಪದಾಂಶರಚನೆ, ಪದ ಹಾಗೂ ವಾಕ್ಯರಚನೆಗಳು ಒಂದು ವಿಶಿಷ್ಟ ರೀತಿಯಲ್ಲಿ ಹೆಣೆದುಕೊಂಡಿರುವುವೆಂದೂ ಅವನ್ನು ವಿಶ್ಲೇಷಿಸಿ ತೋರಿಸಿಕೊಡುವುದೇ ಭಾಷಾವಿಜ್ಞಾನಿಯ ಮುಖ್ಯ ಕೆಲಸವೆಂದೂ ನಿರ್ಮಾಣವಾದದ ಸಿದ್ಧಾಂತ. ನಿರ್ಮಾಣವಾದದಲ್ಲಿ ಹೆಸರಾಂತವರೆಂದರೆ ಜಿನೀವ ನಗರದಲ್ಲಿ ಅಧ್ಯಾಪನ ಮಾಡಿಸುತ್ತಿದ್ದ ಫರ್ಡಿನಾಂಡ್ ಸಸ್ಸೂರ್, ಪ್ರಾಗ್ ಶಾಖೆಯ ನಿಕೊಲಾಯ್ ಟ್ರುಬೆಟ್‍ಸ್ಕಾಯ್, ಅಮೆರಿಕದ ಹಾವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದ ರೋಮನ್ ಯಾಕಬ್‍ಸನ್, ಡೆನ್ಮಾರ್ಕಿನ ಲೂಯಿ ಹೆಲ್ಮ್‍ಸ್ಲೆವ್ ಮತ್ತು ಅಮೆರಿಕದ ಲಿಯೊನಾರ್ಡ್ ಬ್ಲೂಮ್‍ಫೀಲ್ಡ್ ಮತ್ತು ಎಡ್ವರ್ಡ್ ಸಪೀರ್. 19ನೆಯ ಶತಮಾನದ ಕೊನೆಯ ವೇಳೆಗೆ ರಷ್ಯದಲ್ಲಿ ಅಧ್ಯಾಪಕರಾಗಿದ್ದ ಬಾತೋವಿನ್ ಡಿ ಕೊರ್ಟಿನೆ ಎಂಬ ಪೋಲೆಂಡಿನ ವಿದ್ವಾಂಸ ಧ್ವನಿ ಮತ್ತು ಧ್ವನಿಮಾಗಳ ನಡುವಣ ಭೇದವನ್ನು ಗ್ರಹಿಸಿದ. ಸಸ್ಸೂರ್ (1857-1913) ಭಾಷಾಧ್ಯಯನದಲ್ಲಿ ಏಕಕಾಲಿಕ. ಐತಿಹಾಸಿಕ ಎಂಬ ಭೇದಗಳನ್ನು ಗುರುತಿಸಿ ಆ ರೀತಿಯ ಅಧ್ಯಯನವನ್ನು ಬೆಳೆಸಿದ. ಟ್ರುಬೆಟ್ ಸ್ಕಾಯ್ (1890-1938) ಭಾಷೆಯಲ್ಲಿ ಧ್ವನಿಮಾಗಳ ಪ್ರಯೋಜನವನ್ನೂ ಅವನ್ನು ಗುರುತಿಸುವ ವಿಧಾನವನ್ನೂ ರೂಪಿಸಿದ. ಬ್ಲೂಮ್ ಫೀಲ್ಡ್ (1887-1949) ಮತ್ತು ಸಪೀರ್ (1884-1939) ಅಮೆರಿಕನ್ ಇಂಡಿಯನ್ ಭಾಷೆಗಳ ವಿಶೇಷ ಅಧ್ಯಯನದಿಂದ ವರ್ಣನಾತ್ಮಕ ವ್ಯಾಕರಣದ ರೂಪರೇಷೆಗಳನ್ನು ಸಿದ್ಧಪಡಿಸಿದರು. ನಿರ್ಮಾಣವಾದ ಭಾಷಾವಿಜ್ಞಾನಿಗಳು ಬೇರೆ ಭಾಷೆಗಳೊಡನೆ ಹೋಲಿಕೆ ತಾರದೆ ನಿರ್ದಿಷ್ಟ ಕಾಲದ ಭಾಷೆಯೊಂದರಲ್ಲಿ ತೋರಿಬರುವ ಧ್ವನಿಮಾಗಳ ಉಪಯೋಗ ಪದಾಂಶರಚನೆ, ವಾಕ್ಯರಚನೆ ಮೊದಲಾದ ಭಾಷೆಯ ವಿವಿಧ ಅಂಶಗಳನ್ನು ಅಭ್ಯಸಿಸುವುದರಲ್ಲಿ ಅಸಕ್ತರಾದರು. 
ಯಾವುದೇ ಭಾಷೆಯಲ್ಲಿ ಕೆಲವು ನಿರ್ದಿಷ್ಟ ರಚನೆಗಳು ಕಂಡುಬರುವುವು. ಪ್ರಾಣಿಗಳ ಕೂಗು ಮತ್ತು ಮಾನವನ ಭಾಷೆ-ಇವುಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಮಾನವ ಭಾಷೆಯಲ್ಲಿ ರಚನಾಕ್ರಮ ಮುಖ್ಯವಾಗುತ್ತದೆ. ಇಲ್ಲಿ ಧ್ವನಿಪೆಟ್ಟಿಗೆಯಿಂದ ಉಚ್ಚರಿತವಾಗುವ ಧ್ವನಿಗಳೇ ನಿರ್ಣಾಯಕ ಅಂಶಗಳು. ಇವುಗಳಲ್ಲಿ ಸರಳ ಅಥವಾ ಸಂಕೀರ್ಣ ಎಂಬ ಭೇದ ಇಲ್ಲ. ಇದನ್ನು ಅರಿಯಲು ಶಿಕ್ಷಣವೇ ಕಾರಣವೆಂದು ನಿರ್ಮಾಣವಾದಿಗಳ ಪ್ರತಿಪಾದನೆ.

(vi) ವಿಕಾಸವಾದ : ನಿರ್ಮಾಣವಾದಿಗಳು ಧ್ವನಿರಚನೆ, ಪದಾಂಶರಚನೆ, ವಾಕ್ಯರಚನೆ ಎಂಬ ಕ್ರಮದಲ್ಲಿ ಭಾಷೆಯನ್ನು ವಿವರಿಸುತ್ತಾರೆ. ಹೀಗೆ ಭಾಷೆಯ ಸರಳ ರಚನೆಯಿಂದ ಪ್ರಾರಂಭಿಸಿ ಕ್ರಮಕ್ರಮವಾಗಿ ಸಂಕೀರ್ಣ ರಚನೆಯನ್ನು ವಿಶ್ಲೇಷಿಸುತ್ತ ಮುಂದುವರಿಯುತ್ತಾರೆ. ವಿಕಾಸವಾದಿಗಳು ಮಾನವನ ಸಂವಾದ ವಾಕ್ಯರೂಪದಲ್ಲಿ ನಡೆಯುವುದರಿಂದ ವಾಕ್ಯ ರಚನೆಯನ್ನು ವಿಶ್ಲೇಷಿಸುವುದೇ ಮುಖ್ಯವೆಂದು ಭಾವಿಸಿ ವಿಶ್ಲೇಷಣೆಯನ್ನು ವಾಕ್ಯರಚನೆಯಿಂದ ಪ್ರಾರಂಭಿಸಿ ಕೊನೆಯಲ್ಲಿ ಧ್ವನಿರಚನೆಯನ್ನು ವಿವರಿಸುತ್ತಾರೆ. ನೋಮ್ ಚಾಮ್‍ಸ್ಕಿಯವರ ಸಿಂಟ್ಯಾಕ್ಟಿಕ್ ಸ್ಟ್ರಕ್ಚರ್ಸ್ (1957) ಮತ್ತು ಆ್ಯಸ್‍ಪೆಕ್ಟ್ಸ್ ಆಫ್ ದಿ ಥಿಯರಿ ಆಫ್ ಸಿಂಟ್ಯಾಕ್ಸ್ (1965) ಎಂಬ ಗ್ರಂಥಗಳಿಂದ ಈ ವಾದದ ಪ್ರಾರಂಭವನ್ನು ಗುರುತಿಸುವುದು ರೂಢಿಯಾಗಿದೆ.

	ಸಾಮಾನ್ಯ ಭಾಷಾವಿಜ್ಞಾನ : ವಿವರಣಾತ್ಮಕ ಭಾಷಾವಿಜ್ಞಾನ : ಭಾಷೆಯ ನಾನಾ ಮುಖಗಳನ್ನು ವಿಶ್ಲೇಷಿಸಿ ಭಾಷೆಯ ಬಗ್ಗೆ ವಿಶೇóಷ ತಿಳಿವಳಿಕೆ ಉಂಟು ಮಾಡುವುದೇ ವಿವರಣಾತ್ಮಕ ಭಾಷಾವಿಜ್ಞಾನದ ಗುರಿ. ಈ ಬಗೆಯ ಅಧ್ಯಯನ ಮಾಡುವ ಭಾಷಾವಿಜ್ಞಾನಿಗಳು ಯಾವುದಾದರೊಂದು ಭಾಷೆಯ ಬಗ್ಗೆ ಕೆಲಸ ಮಾಡುತ್ತಾರೆ. ಭಾಷೆಯ ಸಾಮಾನ್ಯಲಕ್ಷಣಗಳ ಪರಿಚಯವಾಗಬೇಕಾದರೆ ಬೇರೆ ಬೇರೆ ರಚನೆಗಳನ್ನು ಹೊಂದಿರುವ ಭಾಷೆಗಳನ್ನು ಅಭ್ಯಾಸಮಾಡಬೇಕು. ಭಾಷೆಯಲ್ಲಿ ಮೂರು ಬಗೆಯ ಅವಯವಗಳನ್ನು ಗುರುತಿಸಬಹುದು: ಧ್ವನಿಗಳಿಗೆ ಸಂಬಂಧಿಸಿದಂತೆ ಧ್ವನಿಮಾ ಎಂಬ ಅವಯವ, ಬಾಹ್ಯ ಪ್ರಪಂಚದ ದ್ರವ್ಯ, ಭಾವನೆ ಇತ್ಯಾದಿಗಳಿಗೆ ಸಂಬಂಧಿಸಿದ ಅರ್ಥಾವಯವ, ಇವೆರಡನ್ನೂ ಜೋಡಿಸುವ ಕಾರ ಕಾವಯವ, ಧ್ವನಿಗಳಿಗೂ ಅರ್ಥಕ್ಕೂ ಇರುವ ಸಹಸಂಬಂಧವನ್ನು ತಿಳಿಯಪಡಿಸುವ ಹಾಗೂ ಭಾಷೆಯಲ್ಲಿಯ ಮುಖ್ಯ ಅವಯವವೇ ಕಾರಕಾವಯವ. ಈ ಮೂರು ಅವಯವಗಳ ಪರಸ್ಪರ ಸಂಬಂಧ ಹಾಗೂ ಅವುಗಳ ವಿಶಿಷ್ಟ ರಚನೆಯನ್ನು ವಿಶ್ಲೇಷಿಸುವುದೇ ವ್ಯಾಕರಣ. ಕೆಲವರು ಇವುಗಳೊಂದಿಗೆ ಶಬ್ದಕೋಶವೆಂಬ ನಾಲ್ಕನೆಯ ಅವಯವವನ್ನು ಕೂಡ ಗುರುತಿಸುತ್ತಾರೆ. ಉಳಿದ ಮೂರು ಅವಯವಗಳೊಡನೆ ಇದರ ಸಂಬಂಧವೇನೆಂಬುದು ಇನ್ನೂ ಸರಿಯಾಗಿ ತಿಳಿದಿಲ್ಲವೆನ್ನಬಹುದು.

	ಧ್ವನಿಮಾ ಅವಯವ : ಧ್ವನಿಗಳ ವಿವರಣೆ, ಧ್ವನಿಮಾ ರಚನೆ, ತನ್ಮೂಲಕ ಪದಾಂಶಗಳೆರಡರ ನಡುವಣ ಅರ್ಥಭೇದ ಇತ್ಯಾದಿ ಅಧ್ಯಯನ ಧ್ವನಿಮಾ ಅವಯವದ ಪ್ರಕರಣ. ಧ್ವನಿಗಳನ್ನು ಅನೇಕ ದೃಷ್ಟಿಕೋನಗಳಿಂದ ಅಭ್ಯಸಿಸಬಹುದು. ಧ್ವನ್ಯಂಗಗಳಲ್ಲಿ ಧ್ವನಿಗಳ ಉತ್ಪತ್ತಿ, ಅದನ್ನವಲಂಬಿಸಿ ಅವುಗಳ ವಿಂಗಡಣೆ ಇವನ್ನು ಅಭ್ಯಾಸ ಮಾಡಬಹುದು. ಉಚ್ಚರಿಸಲ್ಪಟ್ಟ ಧ್ವನಿಗಳು ಅಲೆಅಲೆಯಾಗಿ ಗಾಳಿಯಲ್ಲಿ ಹೇಗೆ ತೇಲುತ್ತಿರುತ್ತವೆ; ಆ ಅಲೆಗಳನ್ನು ಸ್ಪೆಕ್ಟ್ರೊಗ್ರಾಫ್, ಕೈಮೊಗ್ರಾಫ್ ಇತ್ಯಾದಿ ಸಾಧನಗಳಿಂದ ತಡೆಯಲ್ಪಟ್ಟಾಗ ಯಾವ ರೀತಿಯ ಗುರುತನ್ನು ತೋರಿಸುತ್ತವೆ ಎಂಬುದನ್ನು ಅಭ್ಯಸಿಸಬಹುದು. ಧ್ವನಿಗಳಲ್ಲಿಯ ವಾದ, ಅನುನಾಸಿಕ ಮುಂತಾದ ಲಕ್ಷಣಗಳು ಕೇಳಿಸಿಕೊಳ್ಳುವವನ ಮನಸ್ಸಿನಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಅಧ್ಯಯನ ಮಾಡಬಹುದು.

	ಶ್ವಾಸಕೋಶಗಳ ಸಂಕೋಚನದಿಂದ ಹೊರದೂಡಲ್ಪಟ್ಟ ಗಾಳಿಯೇ ಧ್ವನಿಯಾಗಿ ಪರಿಣಾಮಗೊಳ್ಳುತ್ತದೆ ಎನ್ನಬಹುದು. ಕಾಕಲಕ ಎಂಬಲ್ಲಿರುವ ಸಣ್ಣ ಪೆಟ್ಟಿಗೆಯಲ್ಲಿ ನಾದವೇರ್ಪಡಲು ಕಾರಣವಾದ ಎರಡು ತೆಳುವಾದ ಪರೆಗಳಿರುತ್ತವೆ. ಪರಸ್ಪರ ಹತ್ತಿರ ಬಂದಾಗ ಹೊರದೂಡಲ್ಪಟ್ಟ ಗಾಳಿಯ ವೇಗದಿಂದ ಈ ಪರೆಗಳು ಅದಿರುತ್ತವೆ. ಅದಿರಿಕೆಯಿಂದ ಕೂಡಿರುವ ಧ್ವನಿಗಳಿಗೆ ಘೋಷಧ್ವನಿಗಳೆಂದು ಹೆಸರು. ಈ ಪರೆಗಳು ಸಡಿಲವಾಗಿದ್ದು ಗಾಳಿ ತೂರಿಕೊಂಡು ಹೋಗುವಾಗ ಅದಿರಿಕೆ ಇಲ್ಲವಾಗುವುದರಿಂದ ಆ ಸ್ಥಿತಿಯಿಂದ ಕೂಡಿದ ಧ್ವನಿಗಳಿಗೆ ಅಘೋಷ ಧ್ವನಿಗಳೆಂದು ಹೆಸರು. ಅಲ್ಲಿಂದ ಮುಂದೆ ಆಸ್ಯಕುಹರವನ್ನು ಪ್ರವೇಶಿಸಿದ ಗಾಳಿ, ನಾಲಗೆಯಿಂದಾಗಲೀ ಕೆಳತುಟಿಯಿಂದಾಗಲೀ ತಡೆಯಲ್ಪಟ್ಟು ಬೇರೆ ಬೇರೆ ವ್ಯಂಜನಧ್ವನಿಗಳಾಗಿ ಮಾರ್ಪಡುತ್ತದೆ. ಯಾವುದಾದರೊಂದು ಕಡೆ ಗಾಳಿಯನ್ನು ಪೂರ್ಣವಾಗಿ ತಡೆಹಿಡಿದು ಒಮ್ಮೆಲೇ ಸ್ಫೋಟಿಸಿದಾಗ ಕೇಳಿಬರುವ ವ್ಯಂಜನ ಧ್ವನಿಗಳನ್ನು ಸ್ಪರ್ಶಗಳೆನ್ನುತ್ತಾರೆ. ತುಟಿಗಳೆರಡನ್ನೂ ಸೇರಿಸಿ ಗಾಳಿಯ ಒತ್ತಡವೇರ್ಪಡುವಂತೆ ಮಾಡಿ ಅನಂತರ ಒಮ್ಮೆಲೇ ಸ್ಫೋಟಿಸಿದರೆ ಪ.ಬ ಎಂಬ ಓಷ್ಠ ಧ್ವನಿಗಳು ಉಂಟಾಗುತ್ತವೆ. ಹೀಗೆ ನಾಲಗೆಯ ಬುಡ, ತುದಿ, ತುದಿಯ ಹಿಂಭಾಗ ಇವುಗಳಿಗೆ ನೇರವಾಗಿ ಎದುರಾಗುವ ಸ್ಥಾನದಲ್ಲಿ ತಡೆ ಉಂಟುಮಾಡಿ ಸ್ಫೋಟಿಸಿದರೆ ಕಂಠ್ಯ, ದಂತ್ಯ, ತಾಲವ್ಯ ಧ್ವನಿಗಳುಂಟಾಗುತ್ತವೆ. ಸ್ಪರ್ಶ ಧ್ವನಿಗಳೇರ್ಪಡುವಾಗ ನಾಸಾ ಕುಹರದ ಬಾಗಿಲು ಮುಚ್ಚಿರುತ್ತವೆ. ಸ್ಪರ್ಶಗಳೇರ್ಪಡುವ ಸ್ಥಾನದಲ್ಲಿ ಗಾಳಿಯ ಮುಖ್ಯ ಪ್ರವಾಹವನ್ನು ತಡೆಹಿಡಿದು ಸ್ಫೋಟಿಸುವುದರೊಡನೆ ಸ್ವಲ್ಪಭಾಗ ಗಾಳಿ ಮೂಗಿನ ಮೂಲಕ ತೂರಿಹೋಗುವಂತೆ ಆದಾಗ ಅನುನಾಸಿಕ ಧ್ವನಿಗಳೇರ್ಪಡುತ್ತವೆ. ಗಾಳಿಯನ್ನು ಪೂರ್ಣವಾಗಿ ತಡೆಹಿಡಿದು ಒತ್ತಡ ಏರ್ಪಡಿಸದೆ ಸಂಕುಚಿತ ಅವಕಾಶದಲ್ಲಿ ಅದು ಹೋಗುವಂತಾದರೆ ಉಂಟಾಗುವ ಘರ್ಷಣೆಯಿಂದ ಊಷ್ಮಧ್ವನಿಗಳಾಗಿ ಮಾರ್ಪಡುತ್ತವೆ. ನಾಲಗೆಯ ಸ್ಥಿತಿ ಹಾಗೂ ನಾಲಗೆಯ ಯಾವ ಭಾಗ ಉಪಯೋಗವಾಗುತ್ತಿದೆ ಎಂಬುದನ್ನು ಅವಲಂಬಿಸಿ ಬಗೆಬಗೆಯ ಸ್ವರಧ್ವನಿಗಳನ್ನು ಗುರುತಿಸಬಹುದು. ಇವು ಏರ್ಪಡುವಾಗ ಗಾಳಿಯ ಸಂಚಾರಕ್ಕೆ ತಡೆಯಾಗುವುದಿಲ್ಲ ಎನ್ನಬಹುದು. ನಾಲಗೆ ಸಹಜ ಸ್ಥಿತಿಯಲ್ಲಿದ್ದಾಗ ಆ ವರ್ಣದ ಉಚ್ಚಾರವಾಗುತ್ತದೆ. ಇತರ ಮಾರ್ಪಾಡುಗಳಿಂದ ಇ, ಉ ಇತ್ಯಾದಿ ಧ್ವನಿಗಳು ಉಂಟಾಗುತ್ತವೆ. ಹೆಚ್ಚು ಬಗೆಯ ಧ್ವನಿಗಳು ಗಾಳಿ ಹೊರಮುಖವಾಗಿ ಹೋಗುತ್ತಿರುವಾಗ ಅಂದರೆ ನಿಶ್ವಾಸದ ಗಾಳಿಯಿಂದುಂಟಾಗುತ್ತವೆ. ಕೆಲವೊಮ್ಮೆ ಶ್ವಾಸಕೋಶದೊಳಕ್ಕೆ ತೆಗೆದುಕೊಳ್ಳುವ ಗಾಳಿಯಿಂದ ಕೂಡ ಸ್ಪರ್ಶಧ್ವನಿಗಳುಂಟಾಗುತ್ತವೆ. ಈ ಬಗೆಯ ಧ್ವನಿಗಳನ್ನು ಸಿಂಧಿ ಭಾಷೆಯಲ್ಲಿ ಕಾಣಬಹುದು.

	ಭಾಷೆಯಲ್ಲಿ ಧ್ವನಿಗಳ ಪ್ರಯೋಜನವೇನು ಎಂಬುದರ ಅಧ್ಯಯನ ಕೂಡ ಬಲುಮುಖ್ಯ. ಎಲ್ಲ ಧ್ವನಿಗಳು ಅರ್ಥಭೇದ ಕಲ್ಪಿಸುವ ವ್ಯಾಪಾರದಲ್ಲಿ ಭಾಗವಹಿಸುವುದಿಲ್ಲ. ಆದ್ದರಿಂದ ಅರ್ಥಭೇದ ಉಂಟುಮಾಡುವ ಧ್ವನಿಗಳನ್ನು ಇತರ ಧ್ವನಿಗಳಿಂದ ಪ್ರತ್ಯೇಕಿಸಲು ಧ್ವನಿಮಾ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಆನೆ ಮತ್ತು ಆಮೆ ಎಂಬ ಪದಗಳು ಬೇರೆ ಬೇರೆ ಅರ್ಥ ಸೂಚಿಸುತ್ತವೆ. ಇದಕ್ಕೆ ಸಾಧನವಾಗಿರುವ ನ್ ಮತ್ತು ಮ್ ಧ್ವನಿಗಳನ್ನು ಧ್ವನಿಮಾಗಳೆನ್ನುತ್ತೇವೆ. ಧ್ವನಿಮಾಗಳು ಒಂದು ಅಥವಾ ಹೆಚ್ಚಿನ ಧ್ವನಿಗಳಿಂದ ಕೂಡಿರುತ್ತವೆ. ಪೂರಕ ಪರಿಸರದಲ್ಲಿ (ಕಾಂಪ್ಲಿಮೆಂಟರಿ ಡಿಸ್ಟ್ರಿಬ್ಯೂಷನ್) ತೋರಿಬರುವ, ಧ್ವನಿಸಾಮ್ಯವಿರುವ (ಫೋನೆಟಿಕ್ ಸಿಮಿಲ್ಯಾರಿಟಿ) ಎರಡು ಅಥವಾ ಹೆಚ್ಚಿನ ಧ್ವನಿಗಳನ್ನು ಒಂದೇ ಧ್ವನಿಮಾದಲ್ಲಿ ಅಂತರ್ಗತ ಮಾಡಬಹುದು. ಸಂಸ್ಕøತದಲ್ಲಿ ತಾಲವ್ಯ ಅನುನಾಸಿಕ ಇತರ ತಾಲವ್ಯ ಸ್ಪರ್ಶಧ್ವನಿಗಳೊಡನೆ ಮಾತ್ರ ಉಪಯೋಗವಾಗುತ್ತದೆ. ಉದಾಹರಣೆಗೆ ಯಜ್ಞ. ಈ ಪರಿಸರದಲ್ಲಿ ದಂತ್ಯ ಅನುನಾಸಿಕ ಬರುವುದಿಲ್ಲವಾದ್ದರಿಂದ ತಾಲವ್ಯ ಅನುನಾಸಿಕವನ್ನು ದಂತ್ಯ ಅನುನಾಸಿಕದೊಂದಿಗೇ ಸೇರಿಸಿ ಒಂದೇ ಧ್ವನಿಮಾವಾಗಿ ಗುರುತಿಸುತ್ತಾರೆ: ಬ ಎಂಬ ಧ್ವನಿಯಲ್ಲಿ ಒಟ್ಟಿಗೇ ಸ್ಪರ್ಶ ಲಕ್ಷಣ, ಘೋಷ ಲಕ್ಷಣ, ಓಷ್ಠ್ಯ ಉಚ್ಚಾರಣ ಲಕ್ಷಣ ಇತ್ಯಾದಿ ಲಕ್ಷಣಗಳು ಕೂಡಿರುತ್ತವೆ.

	ಪ ಎಂಬ ಧ್ವನಿಯೊಡನೆ ವಿರೋಧ ಪರಿಸರದಲ್ಲಿರುವಾಗ ಘೋಷ ಲಕ್ಷಣದಿಂದ ಸ ಎಂಬ ವರ್ಣದೊಡನೆ ವಿರೋಧ ಪರಿಸರದಲ್ಲಿರುವಾಗ ಸ್ಪರ್ಶ ಲಕ್ಷಣದಿಂದ, ಕ ಎಂಬ ವರ್ಣದೊಡನೆ ವಿರೋಧ ಪರಿಸರದಲ್ಲಿದ್ದಾಗ ಓಷ್ಠ್ಯ ಉಚ್ಚಾರ ಲಕ್ಷಣದಿಂದ ಬ ವರ್ಣವನ್ನು ಗುರುತಿಸಲು ಹಾಗೂ ಪ್ರತ್ಯೇಕಿಸಲು ಸಾಧ್ಯವಾಗುತ್ತದೆ. ವಿರೋಧ ಪರಿಸರದಲ್ಲಿರುವ ಧ್ವನಿಗಳು ಬೇರೆ ಬೇರೆ ಧ್ವನಿಮಾಗಳೆಂದು ಪರಿಗಣಿತವಾಗುತ್ತವೆ. (ಉದಾಹರಣೆಗೆ ಕರೆ-ಕಲೆ) ಹೀಗೆ ಅರ್ಥಭೇದವನ್ನು ಸೂಚಿಸಲು ಧ್ವನಿಮಾಗಳಲ್ಲಿರುವ ಒಂದೊಂದೇ ಲಕ್ಷಣಗಳು ಸಾಕು.

	ಆಕೃತಿ ರಚನೆ: ಧ್ವನಿಮಾಗಳ ಒಂದು ವಿಶಿಷ್ಟ ರೀತಿಯ ಜೋಡಣೆಯಿಂದ ಪದಾಂಶಗಳು (ಮಾಫ್ರ್ಸ್) ಏರ್ಪಡುತ್ತವೆ. ಪದಾಂಶಗಳಿಗೆ ಅರ್ಥದ್ಯೋತಕತೆ ಇದೆ. ಇವನ್ನು ಅವಿಭಾಜ್ಯವಾದ ಹಾಗೂ ಅರ್ಥವತ್ತಾದ ಧ್ವನಿಮಾ ಸಮುದಾಯವೆಂದು ಹೇಳಬಹುದು. ಧ್ವನಿಮಾಗಳನ್ನು ನಿಶ್ಚಯಿಸಿದಂತೆಯೇ ಇಲ್ಲೂ ಪೂರಕ ಪರಿಸರಗಳಲ್ಲಿ ಕಂಡುಬರುವ ಅರ್ಥಸ್ವರೂಪತೆಯಿಂದ ಕೂಡಿದ ಪದಾಂಶಗಳನ್ನು ಒಂದೇ ಆಕೃತಿಯಲ್ಲಿ ಅಂತರ್ಗತ ಮಾಡಬಹುದು. ಹೀಗೆ ಮಾಡಿದವುಗಳಿಗೆ ಸಪದಾಂಶಗಳೆಂದು (ಅಲ್ಲೋಮಾಫ್ರ್ಸ್) ಹೆಸರು. ಆಕೃತಿಗಳಿಂದಾದ ರಚನೆಯನ್ನು ಪದ ಎನ್ನುತ್ತಾರೆ. ಪದಗಳಲ್ಲಿ ಒಂದೇ ಆಕೃತಿ ಇರಬಹುದು ಅಥವಾ ಹೆಚ್ಚಿನ ಆಕೃತಿಗಳಿರಬಹುದು. ಉದಾಹರಣೆಗೆ ಮರವನ್ನು ಆಕೃತಿಗಳನ್ನು ಪದರಚನೆಯ ದೃಷ್ಟಿಯಿಂದ ಪ್ರಾತಿಪದಿಕ ಮತ್ತು ಪ್ರತ್ಯಯವೆಂದು ವಿಭಾಗಿಸಬಹುದು. ಪದರಚನೆಯಲ್ಲಿ ಸಾಮಾನ್ಯವಾಗಿ ಅವು ಇದೇ ಆನುಪೂರ್ತಿಯಲ್ಲಿರುತ್ತವೆ. ಪ್ರಾತಿಪದಿಕದ ಹಿಂಬದಿಯಲ್ಲಿ ಸಹ ಪ್ರತ್ಯಯ ಸೇರಬಹುದು. ಆ ರೀತಿಯ ಪ್ರತ್ಯಯವನ್ನು ಪೂರ್ವ ಪ್ರತ್ಯಯವೆಂದೂ ಮುಂದೆ ಸೇರಲ್ಪಡುವ ಪ್ರತ್ಯಯವನ್ನು ಪರಪ್ರತ್ಯಯವೆಂದೂ ಕರೆಯುತ್ತಾರೆ. ದ್ರಾವಿಡ ಭಾಷೆಗಳಲ್ಲಿ ಪೂರ್ವ ಪ್ರತ್ಯಯಗಳಿಲ್ಲವೆನ್ನಬಹುದು. ಇಂಡೊ ಆರ್ಯನ್ ಭಾಷೆಯಾದ ಸಂಸ್ಕøತದಲ್ಲಿ ಇದರ ಉಪಯೋಗ ಹೆಚ್ಚು. ಕೆಲವು ಭಾಷೆಗಳಲ್ಲಿ ಪ್ರಾತಿನಿಧಿಕದೊಳಗೇ ಸೇರಿಕೊಂಡಿರುವ ಪ್ರತ್ಯಯಗಳೂ ಉಂಟು. ಹಾಗೆಯೇ ಕೆಲವು ಭಾಷೆಗಳಲ್ಲಿ ಪ್ರಾತಿಪದಿಕ ಮತ್ತು ಧಾತುಗಳೆಂಬ ವಿಂಗಡನೆಗೆ ಅವಕಾಶವಿರುತ್ತದೆ. ಉದಾಹರಣೆಗೆ ಸಂಸ್ಕøತದಲ್ಲಿ ಭೂ ಎನ್ನುವುದು ಧಾತು. ಭವತಿ ಎನ್ನುವಲ್ಲಿ ಭವ ಎನ್ನುವುದು ಪ್ರಾತಿಪದಕ, ತಿ ಪ್ರತ್ಯಯ ಧಾತುವಿಗೆ ಪ್ರತ್ಯಯವೊಂದು ಸೇರುವುದರಿಂದ ಪ್ರಾತಿಪದಿಕವೇರ್ಪಡುತ್ತದೆ. ಪ್ರಾತಿಪದಿಕಕ್ಕೂ ಧಾತುವಿಗೂ ರೂಪ ಸಮಾನತೆ ಇರುವಲ್ಲಿ ಪದದಲ್ಲಿಯ ಪ್ರತ್ಯಯೇತರ ಭಾಗವನ್ನು ಪ್ರಾತಿಪದಿಕವೆನ್ನಬೇಕು. ಪ್ರಾತಿಪದಿಕಕ್ಕೆ ಪ್ರತ್ಯಯ ಸೇರುವುದರಿಂದ ಪದರಚನೆ ಆಗುತ್ತದೆ. ಪದರಚನೆಯಾಗುವಾಗ ಆಕೃತಿಗಳೆರಡರ ನಡುವೆ ವಿವಿಧ ರೀತಿಯ ಸಂಧಿ ಕಾರ್ಯಗಳೂ ಜರುಗುತ್ತವೆ.

	ಪದಗಳಲ್ಲಿ ನಾಮಪದ, ಕ್ರಿಯಾಪದವೆಂಬ ಭೇದ ಮಾಡಬಹುದು. ಪ್ರಾತಿಪದಿಕಗಳಿಗೆ ವಚನ ಮತ್ತು ವಿಭಕ್ತಿ ಪ್ರತ್ಯಯಗಳು ಸೇರುವುದರಿಂದ ನಾಮಪದವೇರ್ಪಡುತ್ತದೆ. ಕನ್ನಡದಲ್ಲಿ ವಚನಸೂಚಕ ಪ್ರತ್ಯಯಗಳು ಸೇರಿದ ಅನಂತರ ವಿಭಕ್ತಿ ಪ್ರತ್ಯಯಗಳು ಸೇರುತ್ತವೆ. ಉದಾಹರಣೆಗೆ ಹಣ್ಣುಗಳ-ಅನ್ನು ಹಾಗೂ ಏಕವಚನ ಮತ್ತು ಬಹುವಚನದಲ್ಲಿ ಕೆಲವೊಮ್ಮೆ ಒಂದೇ ರೂಪವನ್ನು ಹೊಂದಿರುತ್ತವೆ. ಉದಾಹರಣೆಗೆ-ಅನ್ನು ಲಿಂಗಸೂಚನೆ ಪ್ರಾತಿಪದಿಕದಿಂದಲೇ ಸೂಚಿತವಾಗುತ್ತದೆ. ಧಾತುವಿಗೆ ಕಾಲ ಹಾಗೂ ಪುರುಷವಾಚಕ ಪ್ರತ್ಯಯಗಳು ಸೇರಿ ಕ್ರಿಯಾಪದದ ರಚನೆಯಾಗುತ್ತದೆ. ಮೊದಲು ಕಾಲಸೂಚಕ ಪ್ರತ್ಯಯ ಅನಂತರ ಪುರುಷವಾಚಕ ಪ್ರತ್ಯಯ ಕಂಡುಬರುತ್ತವೆ. ಉದಾಹರಣೆಗೆ ಮಾಡ್-ಇದ-ನು, ಮಾಡ್-ಇದ-ರು. ಕೆಲವು ಭಾಷೆಗಳಲ್ಲಿ ಪ್ರಾತಿಪದಿಕ ಸ್ವತಂತ್ರವಾಗಿ ಬಳಕೆಯಾಗುತ್ತದೆ; ಪ್ರತ್ಯಯಗಳು ಸಾಮಾನ್ಯವಾಗಿ ಬದ್ಧರೂಪಗಳು. ಕೆಲವು ಭಾಷೆಗಳಲ್ಲಿ ಮುಕ್ತರೂಪವಾಗಿರುತ್ತವೆ.

	ಕಾರಕಾವಯವ : ಕಾರಕಾವಯವದಲ್ಲಿ ಗುಪ್ತ ನಿರ್ಮಾಣ ಮತ್ತು ವ್ಯಕ್ತ ನಿರ್ಮಾಣ ಎಂಬ ಭೇದ ಕಲ್ಪನೆ ಆವಶ್ಯಕ. ಹೇಳಿದ ವಾಕ್ಯವನ್ನು ನಾವು ಹೇಗೆ ಅರ್ಥಮಾಡಿಕೊಳ್ಳತ್ತೇವೆಂಬುದು ಗುಪ್ತ ನಿರ್ಮಾಣದಿಂದ ತಿಳಿಯುತ್ತದೆ. ಹೇಳಬೇಕಾದ ವಾಕ್ಯವನ್ನು ಹೇಗೆ ಹೇಳುತ್ತೇವೆಂಬುದು ವ್ಯಕ್ತ ನಿರ್ಮಾಣದಿಂದ ತಿಳಿಯುತ್ತದೆ. ಇವೆರಡಕ್ಕೂ ಸಂಬಂಧ ಕಲ್ಪಿಸಲು ಪರಿವರ್ತನ ನಿಯಮಗಳಿವೆ.

	ವಾಕ್ಯ ರಚನೆ : ವಾಕ್ಯಗಳನ್ನು ಪದಗಳ ರಚನೆಯೆನ್ನಬಹುದು. ಯಾವ ಬಗೆಯಲ್ಲಿ ಒಂದೇ ಧ್ವನಿಮಾದಿಂದಲೇ ಆಕೃತಿಯ ರಚನೆಯಾಗುವುದೊ ಯಾವ ಬಗೆಯಲ್ಲಿ ಒಂದೇ ಆಕೃತಿಯೇ ಪದವಾಗಬಲ್ಲುದೋ ಹಾಗೆಯೇ ಒಂದೇ ಪದದ ವಾಕ್ಯ ಕೂಡ ಭಾಷಾರಚನೆಯಲ್ಲಿ ಸಾಧ್ಯ. ಸಾಮಾನ್ಯವಾಗಿ ವಾಕ್ಯದಲ್ಲಿ ಒಂದು ಅಥವಾ ಹೆಚ್ಚಿನ ನಾಮಬಂಧವೂ ಒಂದು ಆಖ್ಯಾತ ಬಂಧವೂ ಇರುವುದು ಕಂಡುಬರುತ್ತದೆ. ನಾಮಬಂಧದ ಮುಖ್ಯ ಭಾಗ ನಾಮಪದ, ಆಖ್ಯಾತ ಬಂಧದ ಮುಖ್ಯಭಾಗ ಕ್ರಿಯಾಪದ, ನಾಮಬಂಧದಲ್ಲಿ ಕೇವಲ ನಾಮಪದವಾಗಲೀ ವಿಶೇಷಣದಿಂದ ಕೂಡಿದ ನಾಮಪದವಾಗಲೀ ಇರಬಹುದು. ಹಾಗೆಯೇ ಕ್ರಿಯಾಪದವೊಂದೇ ಆಖ್ಯಾತ ಬಂಧವಾಗಿ ಬಳಕೆಗೊಳ್ಳಬಹುದು ಅಥವಾ ಅದರೊಡನೆ ಕ್ರಿಯಾ ವಿಶೇಷಣಗಳಿರಬಹುದು, ಒಂದು ನಾಮಪದ ಕೂಡ ಇರಬಹುದು. ಪೋಲೀಸರು ಕಳ್ಳನನ್ನು ಹಿಡಿದರು- ಎನ್ನುವ ವಾಕ್ಯದಲ್ಲಿ ಹಿಡಿದರು ಇನ್ನುವುದು ಆಖ್ಯಾತ ಬಂಧ, ಉಳಿದೆರಡೂ ನಾಮಬಂಧಗಳು. ಬಾ, ಹೋಗು ಇತ್ಯಾದಿ ಒಂದೇ ಪದದ ವಾಕ್ಯಗಳಲ್ಲಿ ನೀನು ಎಂಬ ಪದ ವ್ಯಕ್ತವಾಗದಿದ್ದರೂ ಗುಪ್ತ ರೀತಿಯಲ್ಲಿ (ಅಧ್ಯಾಹಾರ) ಅಡಗಿದೆಯೆನ್ನಬಹುದು. ಪಕ್ಕದ ಮನೆಯ ಹುಡುಗ ಸೀಬೆಮರದಿಂದ ಬಿದ್ದನು-ಎಂ¨ ವಾಕ್ಯವನ್ನು ಸರಿಯಾಗಿ ಕೇಳಿಸಿಕೊಳ್ಳದವನು, ಯಾರು ಬಿದ್ದವರು, ಎಂದು ಪುನಃ ಕೇಳಬಹುದು. ಉತ್ತರವಾಗಿ, ಪೂರ್ತಿಯಾಗಿ ಮೊದಲಿನ ವಾಕ್ಯವನ್ನು ಹೇಳದೆ, ಪಕ್ಕದ ಮನೆಯ ಹುಡುಗ ಎಂಬುದಾಗಿ ಮಾತ್ರ ಹೇಳಬಹುದು. ಈ ರೀತಿಯ ವಾಕ್ಯಗಳನ್ನು ಪೂರ್ಣ ವಾಕ್ಯದ ಸಂಕ್ಷೇಪ ರೂಪಗಳೆನ್ನಬಹುದು.

	ವಾಕ್ಯದಲ್ಲಿ ನಾಮಬಂಧಗಳು ಆಖ್ಯಾತ ಬಂಧದೊಡನೆ ವಿಶಿಷ್ಟ ಸಂಬಂಧದಲ್ಲಿರುತ್ತವೆ. ಈ ಸಂಬಂಧವನ್ನು ಕಾರಕ ಸಂಬಂಧವೆನ್ನಬಹುದು. ಕಾರಕ ಸಂಬಂಧ ಗುಪ್ತ ನಿರ್ಮಾಣಕ್ಕೆ ಸೇರಿದುದು. ಈ ಸಂಬಂಧಗಳು ವ್ಯಕ್ತ ನಿರ್ಮಾಣದಲ್ಲಿ ವಿಭಕ್ತಿಗಳ ಮೂಲಕ ಅಥವಾ ಉಪಸರ್ಗಗಳ ಮೂಲಕ ವ್ಯಕ್ತವಾಗುತ್ತವೆ. ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳಿಂದ ಕಾರಕ ಸಂಬಂಧ ತಿಳಿಯುತ್ತದೆ. ಪ್ರತಿಯೊಂದು ಕಾರಕ ಸಂಬಂಧವೂ ಮುಖ್ಯವಾಗಿ ಒಂದು ವಿಭಕ್ತಿ ಪ್ರತ್ಯಯದಿಂದ ವ್ಯಕ್ತವಾಗುತ್ತದೆ. ಪ್ರಪಂಚದ ಯಾವುದೇ ಭಾಷೆಯಲ್ಲಾದರೂ ಈ ರೀತಿ ಕಾರಕ ಸಂಬಂಧವಿರಲೇಬೇಕೆಂದೂ ಅವುಗಳ ಸಂಖ್ಯೆ ಹೆಚ್ಚಿರಲಾರದೆಂದೂ ಊಹಿಸಲಾಗಿದೆ. ಕನ್ನಡ ಭಾಷೆಯಲ್ಲಿ ಆರು ಕಾರಕ ಸಂಬಂಧಗಳ ಅವಶ್ಯಕತೆ ಇದೆ : ಕರ್ತೃ, ಕರ್ಮ, ಕರಣ, ಸಂಪ್ರದಾನ, ಅಪಾದಾನ, ಅಧಿಕರಣ. ಕರ್ತೃ ಕಾರಕವನ್ನು ಸೂಚಿಸಲು ಪ್ರತ್ಯೇಕ ವಿಭಕ್ತಿ ಇಲ್ಲ. ಕರಣ ಹಗೂ ಅಪಾದಾನ ಎರಡೂ-ಇಂದ ಎಂಬ ಪ್ರತ್ಯಯದಿಂದ ಸೂಚಿಸಲ್ಪಡುತ್ತವೆ. ಕರ್ಮ, ಸಂಪ್ರದಾನ, ಅಧಿಕರಣ ಕ್ರಮವಾಗಿ-ಅನ್ನು, -ಇಗೆ-ಕ್ಕೆ, -ಅಲ್ಲಿ ಎಂಬ ವಿಭಕ್ತಿ ಪ್ರತ್ಯಯಗಳಿಂದ ವ್ಯಕ್ತವಾಗುತ್ತವೆ. ಹಳ್ಳಿಯ ಹುಡುಗ ಎಂಬ ನಾಮ ಬಂಧದಲ್ಲಿರುವ ನಾಮಪದಗಳೆರಡರ ನಡುವಣ ಸಂಬಂಧವನ್ನು ಕಾರಕ ಸಂಬಂಧವೆಂದು ಪರಿಗಣಿಸುವುದಿಲ್ಲ.

	ಮೇಲೆ ಹೇಳಿದ ಕಾರಕ ಸಂಬಂಧಗಳನ್ನು ಕೆಲವು ವಾಕ್ಯಗಳ ಮೂಲಕ ತಿಳಿಯಪಡಿಸಬಹುದು. ರೈತನು ಹೊಲದಲ್ಲಿ ಬೆಳೆಯನ್ನು ಬೆಳೆಸುತ್ತಾನೆ. ಎಂಬ ಕನ್ನಡ ವಾಕ್ಯದಲ್ಲಿ ರೈತನು-ಕರ್ತೃ ಸಂಬಂಧವನ್ನೂ; ಹೊಲದಲ್ಲಿ-ಅಧಿಕರಣ ಸಂಬಂಧವನ್ನೂ; ಬೆಳೆಯನ್ನು-ಕರ್ಮಸಂಬಂಧವನ್ನೂ ತೋರಿಸುತ್ತವೆ. ಅವನು ಮರದಿಂದ ಬಿದ್ದನು ಎಂಬ ವಾಕ್ಯದಲ್ಲಿ ಮರದಿಂದ ಎನ್ನುವುದು ಕ್ರಿಯೆಯೊಡನೆ ಅಪಾದಾನ ಸಂಬಂಧದಲ್ಲಿದೆ. ಕೊಡಲಿಯಿಂದ ಕಡಿದನು ಎಂಬ ವಾಕ್ಯದಲ್ಲಿ ಕೊಡಲಿಯಿಂದ ಎಂಬ ನಾಮಬಂಧ ಕರಣಕಾರಕದಲ್ಲಿದೆ. ಬ್ರಾಹ್ಮಣನಿಗೆ ಹಸುವನ್ನು ದಾನಮಾಡಿದನು ಎನ್ನುವ ವಾಕ್ಯದಲ್ಲಿ ಬ್ರಾಹ್ಮಣನಿಗೆ ಎಂಬ ನಾಮಬಂಧ ಕ್ರಿಯೆಯೊಡನೆ ಸಂಪ್ರದಾನ ಸಂಬಂಧವನ್ನು ಹೊಂದಿದೆ. ಯಾವುದೇ ವಾಕ್ಯದಲ್ಲೂ ಒಂದೇ ಕಾರಕಸಂಬಂಧ ಎರಡು ಸಲ ಬರುವುದಿಲ್ಲ.

	ವಾಕ್ಯರಚನೆಯಲ್ಲಿ ಕೆಲವೊಮ್ಮೆ ಕ್ರಿಯಾಪದಕ್ಕೆ ಅನುಗುಣವಾಗಿ ಕಾರಕ ಸಂಬಂಧಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ತಿನ್ನು ಎಂಬ ಕ್ರಿಯೆಯ ಪ್ರಯೋಗದಲ್ಲಿ ಕರ್ಮಕಾರಕ ಸಂಬಂಧದ ನಾಮಬಂಧವೊಂದಿರಲೇಬೇಕು. ಕೊಡು ಎಂಬ ಕ್ರಿಯೆಯೊಡನೆ ಸಂಪ್ರದಾನ ಹಾಗೂ ಕರ್ಮ ಎರಡೂ ಸಂಬಂಧಗಳಿರಲೇಬೇಕು. ಹೀಗೆ ವಾಕ್ಯರಚನೆ ಮಾಡುವಾಗ ಕ್ರಿಯಾಪದಕ್ಕೆ ಅನುಗುಣವಾದ ನಾಮಪದಗಳನ್ನು ಆರಿಸಿಕೊಳ್ಳುವುದು. ಅವನ್ನು ಒಂದು ಆನುಪೂರ್ವಿಯಲ್ಲಿ ಜೋಡಿಸುವುದು. ಹಾಗೆ ಜೋಡಿಸುವಾಗ ಅವಶ್ಯವಾದ ಕೆಲವು ಮಾರ್ಪಾಡುಗಳನ್ನು ಮಾಡುವುದು ಮೊದಲಾದ ಅನ್ವಯ ಕ್ರಮಗಳಿವೆ. ಯಾವುದೇ ವಾಕ್ಯದ ಮುಖ್ಯವಾದೆರಡು ಅಂಗಗಳೆಂದರೆ (ಕಾನ್ಸ್‍ಟಿಟ್ಯುಯೆಂಟ್ಸ್) ನಾಮಬಂಧ ಹಾಗೂ ಆಖ್ಯಾತಬಂಧ ನಾಮಬಂಧ ವಾಕ್ಯದಲ್ಲಿ ಕರ್ತೃವಾಗಿರಬಹುದು. ಕರ್ತೃವಿನೊಡನೆ ಕರ್ಮಪದವೂ ಉಪಯೋಗವಾಗಿದ್ದರೆ ವಿಭಜನೆ ಮಾಡುವಾಗ ಅದು ಆಖ್ಯಾತಬಂಧದೊಡನೆ ಸೇರುತ್ತದೆ. ಬೇಟೆಗಾರನು ಹುಲಿಯನ್ನು ಕೊಂದನು ಎಂಬ ವಾಕ್ಯವನ್ನು (i) ಬೇಟೆಗಾರನು (ii) ಹುಲಿಯನ್ನು ಕೊಂದನು. ಎಂದು ಎರಡು ಭಾಗಗಳಾಗಿ ಒಡೆಯಬಹುದು. ಎರಡನೆಯ ವಿಭಜನೆಯಲ್ಲಿ ಆಖ್ಯಾತಬಂಧವನ್ನು ಹುಲಿಯನ್ನು, ಕೊಂದನು ಎಂಬು ವಿಭಾಗಿಸಬಹುದು.

	ವಾಕ್ಯಗಳನ್ನು ಸಾಮಾನ್ಯ, ಸಂಶ್ಲಿಷ್ಟ ಮತ್ತು ಸಂಯುಕ್ತ ವಾಕ್ಯಗಳೆಂದು ಮೂರು ಬಗೆಯಲ್ಲಿ ಗುರುತಿಸಬಹುದು. ಒಂದು ವಾಕ್ಯದೊಳಗೆ ನಿರ್ದಿಷ್ಟ ಸ್ಥಾನದಲ್ಲಿ ಮತ್ತೊಂದು ವಾಕ್ಯವನ್ನು ಸೇರಿಸಿದರೆ ಸಂಶ್ಲಿಷ್ಟ ವಾಕ್ಯವೂ ಒಂದು ವಾಕ್ಯದೊಡನೆ ಇನ್ನೊಂದು ವಾಕ್ಯವನ್ನು ಸೇರಿಸಿದರೆ ಸಂಯುಕ್ತ ವಾಕ್ಯವೂ ಏರ್ಪಡುತ್ತವೆ. ಸಂಶ್ಲಿಷ್ಟ ಹಾಗೂ ಸಂಯುಕ್ತ ವಾಕ್ಯಗಳೇರ್ಪಡುವಾಗ ಕೆಲವು ಮಾರ್ಪಾಡುಗಳು ಅವಶ್ಯಕ. ಈ ಮಾರ್ಪಾಡುಗಳಾದನಂತರವೇ ವಾಕ್ಯಗಳು ಪ್ರಯೋಗಾರ್ಹವಾಗುತ್ತವೆ. ಸಾಮಾನ್ಯ ವಾಕ್ಯದಲ್ಲಿ ಮತ್ತೆ ಪ್ರಭೇದಗಳನ್ನು ಗುರುತಿಸಬಹುದು. ಸಾಮಾನ್ಯ ವಾಕ್ಯಗಳಲ್ಲಿ ಅತಿ ಸಾಮಾನ್ಯ ವಾಕ್ಯಗಳೆಂದರೆ ನಿಶ್ಚಯಾರ್ಥಕ ವಾಕ್ಯಗಳು, ಕೆಲವು ಮಾರ್ಪಾಡುಗಳಿಂದ ನಿಶ್ಚಯಾರ್ಥಕ ವಾಕ್ಯವನ್ನು ಪ್ರಶ್ನಾರ್ಥಕ ವಾಕ್ಯಗಳಾಗಿ ಪರಿವರ್ತಿಸಬಹುದು.

	ವಾಕ್ಯಗಳು ಕ್ರಿಯೆಯಿಂದ ಕೂಡಿರಬಹುದು ಅಥವಾ ಕ್ರಿಯಾರಹಿತವಾಗಿರಬಹುದು. ಅವನು ವಿದ್ಯಾರ್ಥಿ, ರಾಮನು ನನ್ನ ಸ್ನೇಹಿತ-ಇತ್ಯಾದಿ ವಾಕ್ಯಗಳು ಕ್ರಿಯಾರಹಿತ ವಾಕ್ಯ ಪ್ರಭೇದಕ್ಕೆ ಉದಾಹರಣೆಗಳು. ಈ ವಾಕ್ಯಗಳಲ್ಲಿಯ ಎರಡು ಅಂಗಗಳೂ ನಾಮಬಂಧಗಳೇ. ಇವುಗಳ ಪೈಕಿ ಒಂದನ್ನು ಉದ್ದೇಶ್ಯ ಎಂದೂ ಮತ್ತೊಂದನ್ನು ವಿಧೇಯ ಎಂದೂ ಕರೆಯುತ್ತಾರೆ. ಈ ವಾಕ್ಯಗಳಲ್ಲಿ ವಿಧೇಯನಾಮಬಂಧವೇ ಕ್ರಿಯಾಪದದ ಕೆಲಸ ಮಾಡುತ್ತದೆನ್ನಬಹುದು. ಈ ರೀತಿಯ ವಾಕ್ಯಗಳನ್ನು ಸಮೀಕರಣ ವಾಕ್ಯ (ಈಕ್ವೇಷನಲ್) ಎನ್ನಬಹುದು. ಸಂಶ್ಲಿಷ್ಟ ವಾಕ್ಯಗಳಲ್ಲಿಯ ಎರಡು ವಾಕ್ಯಗಳಲ್ಲಿ ಒಂದನ್ನು ಗೌಣವಾಕ್ಯವೆಂದೂ ಇನ್ನೊಂದನ್ನು ಪ್ರಧಾನವಾಕ್ಯವೆಂದೂ ಪರಿಗಣಿಸಬಹುದು. ಸಾಮಾನ್ಯವಾಗಿ ಇವುಗಳ ಆನುಪೂರ್ವಿಯನ್ನು ನೋಡಿದರೆ ಮೊದಲು ಗೌಣವಾಕ್ಯ ಅನಂತರ ಪ್ರಧಾನ ವಾಕ್ಯವಿರುವುದು ಕಂಡುಬರುತ್ತದೆ. ನೀನು ಬಂದಾಗ ನಾನು ಊಟ ಮಾಡುತ್ತಿದ್ದೆ ಎಂಬ ಸಂಶ್ಲಿಷ್ಟ ವಾಕ್ಯದಲ್ಲಿ ನೀನು ಬಂದೆ ಎನ್ನುವುದು ಗೌಣವಾಕ್ಯ. ನಾನು ಊಟಮಾಡುತ್ತಿದ್ದೆ ಎನ್ನುವುದು ಪ್ರಧಾನ ವಾಕ್ಯ. ಗೌಣವಾಕ್ಯದ ಕ್ರಿಯಾಬಂಧ ಸಾಮಾನ್ಯವಾಗಿ ಕೃದಂತ ರೂಪದಲ್ಲಿರುತ್ತದೆ. ಮಗು ಊಟ ಮಾಡಿ ನಿದ್ದೆ ಮಾಡಿತು ಎಂಬ ವಾಕ್ಯದಲ್ಲಿ ಮಗು ಊಟ ಮಾಡಿತು. ಹಾಗೂ ಮಗು ನಿದ್ದೆ ಮಾಡಿತು ಎಂಬ ಎರಡು ಗುಪ್ತ ನಿರ್ಮಾಣ ವಾಕ್ಯಗಳಿವೆ. ಎರಡು ವಾಕ್ಯಗಳಲ್ಲಿಯ ಕರ್ತೃವೂ ಒಂದೇ ಆದ್ದರಿಂದ ವ್ಯಕ್ತನಿರ್ಮಾಣ ವಾಕ್ಯದಲ್ಲಿ ಒಂದು ಕರ್ತೃವನ್ನು ಲೋಪಿಸಿ ಆ ವಾಕ್ಯವನ್ನು ಇನ್ನೊಂದು ವಾಕ್ಯದಲ್ಲಿ ಅಂತರ್ಗತ ಮಾಡಿದೆ. ಇಲ್ಲಿ ಮಗು ನಿದ್ದೆ ಮಾಡಿತು ಎನ್ನುವುದು ಪ್ರಧಾನವಾಕ್ಯ, ಮಗು ಊಟಮಾಡಿತು ಎನ್ನುವುದು ಗೌಣವಾಕ್ಯ. ಗೌಣವಾಕ್ಯದ ಆಖ್ಯಾತಬಂಧ ಅಪೂರ್ಣ ಕ್ರಿಯಾರೂಪದಲ್ಲಿದೆ. ಇಲ್ಲಿ ವಾಕ್ಯಗಳ ಅನುಪೂರ್ವಿ ಕ್ರಿಯೆ ಜರಗಿದ ಅನುಪೂರ್ವಿಯನ್ನು ಸಹ ಸೂಚಿಸುತ್ತದೆ.

ಸಂಯುಕ್ತ ವಾಕ್ಯದಲ್ಲಿ ಎರಡು ಅಥವಾ ಹೆಚ್ಚಿನ ವಾಕ್ಯಗಳಿರಬಹುದು. ಸಂಯುಕ್ತ ವಾಕ್ಯದಲ್ಲಿ ಪ್ರದಾನ ಗೌಣ ಎಂಬ ಭೇದ ಮಾಡಲಾಗುವುದಿಲ್ಲ. ಎರಡು ವಾಕ್ಯಗಳೂ ಸಮಾನವಾಗಿರುತ್ತವೆ. ರಾಮ, ಭೀಮ ಸಿನಿಮಾಕ್ಕೆ ಹೋದನು ಎಂಬೆರಡು ಗುಪ್ತ ನಿರ್ಮಾಣ ವಾಕ್ಯಗಳಿಂದ ನಿಷ್ಪನ್ನವಾಗಿದೆಯೆನ್ನಬಹುದು. ಸಂಶ್ಲಿಷ್ಟ ವಾಕ್ಯದಲ್ಲಿಯಂತೆಯೇ ಎರಡೂ ವಾಕ್ಯಗಳ ಕರ್ತೃ ಒಂದೇ ಆಗಿದ್ದಾಗ ಒಂದು ವಾಕ್ಯದಲ್ಲಿ ಕರ್ತೃ ಲೋಪವಾಗುತ್ತದೆ. ಅವನು ಸಿರಿವಂತ, ಅವನು ರೂಪವಂತ ಎಂಬ ಸಾಮಾನ್ಯ ವಾಕ್ಯಗಳನ್ನು ಒಂದುಗೂಡಿಸಿ ಅವನು ಸಿರಿವಂತ, ರೂಪವಂತ ಎಂದು ಸಂಯುಕ್ತ ವಾಕ್ಯವಾಗಿ ಮಾರ್ಪಡಿಸಬಹುದು.
ಐತಿಹಾಸಿಕ ಭಾಷಾವಿಜ್ಞಾನ : ಭಾಷೆಯಲ್ಲಿ ಬದಲಾವಣೆಗಳು ತೋರಿಬರುವುದು ಸಹಜ. ಬದಲಾಣೆಯೇ ಇಲ್ಲದೆ ಎಂದೆಂದಿಗೂ ಒಂದೇ ಸ್ಥಿತಿಯಲ್ಲುಳಿದು ಬಂದಿರುವ ಭಾಷೆ ಯಾವುದೂ ಇಲ್ಲ. ಕೆಲವೊಮ್ಮೆ ಪರಿಸ್ಥಿತಿಗಳಿಗೆ ಅನುಸಾರವಾಗಿ ಬದಲಾವಣೆಯ ವೇಗದಲ್ಲಿ ತಾರತಮ್ಯ ಕಂಡು ಬರಬಹುದು. ಪ್ರತಿನಿಮಿಷದಲ್ಲೂ ಮಾರ್ಪಾಡುಗುತ್ತಿರುವ ಭಾಷಿಕ ಬದಲಾವಣೆಗಳು ನಮ್ಮ ಸ್ಥೂಲದ ದೃಷ್ಟಿಗೆ ಗೋಚರಿಸುವುದಿಲ್ಲ. ಆದರೆ ಭಾಷೆಯ ರೂಪರೇಷೆಯಲ್ಲಿ ಬದಲಾವಣೆಯಿಂದಾಗಿ ಹೆಚ್ಚಿನ ವ್ಯತ್ಯಾಸ ಉಂಟಾದಾಗ ಮಾತ್ರ ಭಾಷೆ ಬದಲಾಯಿಸಿರುವ ವಿಚಾರ ನಮ್ಮ ಗಮನಕ್ಕೆ ಬರುತ್ತದೆ. ಬದಲಾವಣೆಗಳು ಪದಗಳ ಉಚ್ಚಾರಣೆಯಲ್ಲಿ, ಅರ್ಥದಲ್ಲಿ ಹಾಗೂ ವಾಕ್ಯರಚನೆಯಲ್ಲಿ ಕಂಡುಬರುತ್ತವೆ. ಈ ಮಾರ್ಪಾಡುಗಳಿಂದಾಗಿ ಭಾಷೆಯ ಬೆಳೆವಣಿಗೆಯಲ್ಲಿ ವಿವಿಧ ಘಟ್ಟಗಳನ್ನು ಗುರುತಿಸಲು ಅನುಕೂಲವಾಗುತ್ತದೆ. ಕನ್ನಡ ಭಾಷೆಯನ್ನು ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎಂಬುದಾಗಿ ವರ್ಗೀಕರಿಸಲಾಗಿದೆ. ಕಾಲದಿಂದ ಕಾಲಕ್ಕೆ ತಲೆದೋರಿದ ಭಾಷಿಕ ಬದಲಾವಣೆಗಳೇ ಇದಕ್ಕೆ ಕಾರಣವೆನ್ನಬಹುದು. ಕೆಲವೊಮ್ಮೆ ಒಂದೇಭಾಷೆಯ ವಿವಿಧ ಘಟ್ಟಗಳಿಗೆ ಬೇರೆ ಬೇರೆ ಹೆಸರನ್ನೇ ಕೊಡಬಹುದು. ಉದಾಹರಣೆಗೆ ಸಂಸ್ಕøತ, ಶೌರಸೇನಿ ಪ್ರಾಕೃತ, ಹಿಂದೀ ಹೀಗೆ ಭಾಷೆಯ ವಿವಿಧ ಆಂಶಗಳಲ್ಲಿ ಕಂಡುಬರುವ ಬದಲಾವಣೆಗಳನ್ನು ಅಭ್ಯಸಿಸುವುದೇ ಐತಿಹಾಸಿಕ ಭಾಷಾವಿಜ್ಞಾನದ ಗುರಿ, ಒಂದೇ ಭಾಷೆಯ, ಎರಡು ಬೇರೆ ಬೇರೆ ಕಾಲದ ಸ್ವರೂಪವನ್ನು ವಿವರಣಾತ್ಮಕ ವ್ಯಾಕರಣದ ತತ್ತ್ವಗಳನ್ನು ಅವಲಂಬಿಸಿ ವಿಶ್ಲೇಷಿಸಿದ ಅನಂತರ ತೌಲನಿಕವಾಗಿ ಹೋಲಿಸಿ ನೋಡಿದಾಗ ಅವೆರಡು ಭಾಷಾಸ್ವರೂಪಗಳಲ್ಲಿ ಅನೇಕ ಮಾರ್ಪಾಡುಗಳಾಗಿರುವುದು ಕಂಡು ಬರುತ್ತದೆ. ಉದಾಹರಣೆಗೆ ಹಳಗನ್ನಡದಲ್ಲಿ ಕಾಣಬರುವ ಪದಾದಿಯ ಪ್ರಕಾರ ನಡುಗನ್ನಡದ ಕಾಲಕ್ಕೆ ಹ-ಕಾರವಾಗಿ ಪರಿವರ್ತಿತವಾಗಯಿತು. ಉದಾಹರಣೆಗೆ ಪತ್ತು-ಹತ್ತು. ಪುಲಿ-ಹುಲಿ, ಪಾಲು-ಹಾಲು.
ಭಾಷೆಯಲ್ಲಿ ಚಾರಿತ್ರಿಕ ಪ್ರಭೇದಗಳು ಕಂಡುಬರುವಂತೆ ಕೆಲವೊಮ್ಮೆ ಭಾಷಿಕ ಬದಲಾವಣೆಗಳನ್ನು ಆ ಭಾಷೆಯ ಭೌಗೋಳಿಕ ವ್ಯಾಪ್ತಿಯ ದೃಷ್ಟಿಯಿಂದ ನೋಡಿದಾಗ ಎಲ್ಲೆಡೆಯಲ್ಲೂ ಸಮಾನವಾಗಿ ವ್ಯಾಪಿಸದೇ ಇರುವುದು ಕಂಡುಬರುತ್ತದೆ. ಭೌಗೋಳಿಕ ಮಿತಿಗೊಳಪಟ್ಟ ಮಾರ್ಪಾಡುಗಳಿಂದ ಉಪಭಾಷೆಗಳು (ಡಯಲೆಕ್ಟ್ಸ್) ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ. ಮೈಸೂರು ಕನ್ನಡದ ವನ್ಕೆ ಒನಕೆ ಎನ್ನುವ ಪದ, ಗುಲ್ಬರ್ಗದ ಪ್ರಭೇದದಲ್ಲಿ ವಣ್ಚಿ ಎಂದೂ ಹವ್ಯಕರ ಪ್ರಭೇದದಲ್ಲಿ ಒಣಕ್ಚೆ ಎಂದೂ ಕಂಡು ಬರುತ್ತದೆ. ಹಾಗೆಯೇ ಬಳ್ಳಾರಿಯ ಕುಳ್ಡ-ಕುರುಡ ಎಂಬ ಪದ ಗುಲ್ಬರ್ಗದಲ್ಲಿ ಕುಡ್ದ ಎಂದೂ ನಂಜನಗೂಡಿನಲ್ಲಿ ಕುಂಡ ಎಂದೂ ತೋರಿ ಬರುತ್ತದೆ. ಈ ಉಪಭಾಷೆಗಳೇ ಕಾಲಕ್ರಮದಲ್ಲಿ ಪರಸ್ಪರ ಸಂಪರ್ಕ ತಪ್ಪಿಹೋದರೆ ಸ್ವತಂತ್ರ ಭಾಷೆಗಳಾಗಿ ಬೆಳೆಯುತ್ತವೆ. ಕನ್ನಡ, ತಮಿಳು, ಮಲಯಾಳ, ತೆಲಗು ಮುಂತಾದ ಭಾಷೆಗಳು ಒಂದು ಕಾಲಕ್ಕೆ ಒಂದೇ ಭಾಷೆಯ ಉಪಭಾಷೆಗಳಾಗಿದ್ದಿರಬೇಕು. ಈಗ ಅವುಗಳ ಕಾಣಬರುವ ಧ್ವನಿ-ಅರ್ಥ ಸಾದೃಶ್ಯದ ಆಧಾರದ ಮೇಲೆ ಅವಕ್ಕೆ ಮೂಲಭಾಷೆಯನ್ನು ಪುನಾರಚಿಸಬಹುದು. ಒಂದೇ ಮೂಲಭಾಷೆಯಲ್ಲಿ ಸೇರಿಸಲ್ಪಡುವ ಭಾಷೆಗಳಲ್ಲಿ ಕಂಡುಬರುವ ನಿಯಮಿತ ಧ್ವನಿ ಸಾದೃಶ್ಯ ಬಹಳ ಮುಖ್ಯ. ಉದಾಹರಣೆಗೆ, ಕನ್ನಡ ಕಾಲು-ತೆಲುಗು ಕಾಲು; ಕನ್ನಡ ಕಿವಿ-ತೆಲುಗು ಚೆವಿ; ತೆಲುಗಿನಲ್ಲಿ ಕೆಲವೊಮ್ಮೆ ಚ-ಕಾರ, ಕೆಲವೊಮ್ಮೆ ಕ-ಕಾರ ಕಂಡು ಬರುವುದಕ್ಕೆ ಪರಿಸರ ಭೇದವೇ ಕಾರಣವೆಂದೂ ಈ ಭೇದ ಮೂಲ ಭಾಷೆಯದಲ್ಲವೆಂದೂ ಕನ್ನಡವೇ ಮೂಲಭಾಷೆಯ ಸ್ಥಿತಿಯನ್ನು ಸರಿಯಾಗಿ ಪ್ರತಿಬಿಂಬಿಸುವುದೆಂದೂ ತಿಳಿದುಬಂದಿದೆ. ಒಂದು ಮೂಲಭಾಷೆಯಲ್ಲಿ ಅಂತರ್ಗತ ಮಾಡಲು ಭಾಷೆಗಳ ನಡುವೆ ಧ್ವನಿ ಸಾದೃಶ್ಯವೇ ಕಂಡುಬರಬೇಕೆಂದಿಲ್ಲ. ವೈದೃಶ್ಯ ಪರಿಗಣಿಸಬಹುದು. ಹೀಗೆ ಪುನಾರಚಿಸಿದ ಮೂಲಭಾಷೆಗಳನ್ನು ಆಧಾರವಾಗಿಟ್ಟುಕೊಂಡು, ಇಂದು ಬಳಕೆಯಲ್ಲಿರುವ ಭಾಷೆಗಳಲ್ಲಿ ಆ ಮೂಲಭಾಷೆಯ ಯಾವ ಲಕ್ಷಣಗಳು ಉಳಿದು ಬಂದಿವೆ, ಯಾವ ಲಕ್ಷಣಗಳು ಅಳಿದು ಹೋಗಿವೆ ಎಂಬ ವಿಚಾರಗಳೇ ಚಾರಿತ್ರಿಕ ವ್ಯಾಕರಣದ ಅಂಗವಾದ ತುಲನಾತ್ಮಕ ವ್ಯಾಕರಣದ ವಸ್ತು. ಪ್ರಪಂಚದಲ್ಲಿ ವ್ಯವಹಾರದಲ್ಲಿರುವ ಸಾವಿರಾರು ಭಾಷೆಗಳನ್ನು ಬೇರೆಬೇರೆ ಪರಿವಾರಗಳಲ್ಲಿ ವಿಂಗಡಿಸುವುದೂ ಒಂದೇ ಪರಿವಾರದಲ್ಲಿ ಸೇರಿಸಲ್ಪಟ್ಟ ಅನೇಕ ಭಾಷೆಗಳ ಮೂಲ ಭಾಷೆಯನ್ನು ಪುನಾರಚಿಸುವುದೂ ಐತಿಹಾಸಿಕ-ತೌಲನಿಕ ಭಾಷಾವಿಜ್ಞಾನಿಗಳ ಮುಖ್ಯ ಕೆಲಸ. ಧ್ವನಿಪರಿಣಾಮಗಳಿಂದಾಗಿ ಭಾಷೆಯಲ್ಲಿ ಕಂಡುಬರುವ ಕೆಲವು ಲಕ್ಷಣಗಳ ಆಧಾರದಿಂದ ಆಡುಭಾಷೆಗಳ ಪೂರ್ವರೂಪಗಳನ್ನು ಸಹ ಪುನಾರಚಿಸಬಹುದೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಅನ್ವಿತ ಭಾಷಾವಿಜ್ಞಾನ : 1 ಸಾಮಾಜಿಕ ಭಾಷಾವಿಜ್ಞಾನ : ಭೌಗೋಳಿಕ ಮತ್ತು ಚಾರಿತ್ರಿಕ ಪ್ರಭೇದಗಳೇ ಅಲ್ಲದೆ, ಭಾಷೆಯಲ್ಲಿ ಸಾಮಾಜಿಕ ಪ್ರಭೇದಗಳನ್ನೂ ಗುರುತಿಸಬಹುದು. ಸಮಾಜದಲ್ಲಿ ಕಂಡು ಬರುವ ವಿವಿಧ ವರ್ಗಗಳಿಗೆ ಸೇರಿದ ಜನರ ಭಾಷೆಯಲ್ಲಿಯ ಪರಸ್ಪರ ವ್ಯತ್ಯಾಸವನ್ನು ಅಭ್ಯಾಸಮಾಡುವುದೇ ಸಾಮಾಜಿಕ ಭಾಷಾವಿಜ್ಞಾನವೆನ್ನಬಹುದು. ಉದಾಹರಣೆಗೆ, ನಂಜನಗೂಡಿನ ಕನ್ನಡ ಪ್ರಭೇದದ ಬ್ರಾಹ್ಮಣರ ಮಾತಿನಲ್ಲಿ ಗೋಡೆ ಹರಿಜನರ ಮಾತಿನಲ್ಲಿ ಗ್ವಾಡೆ ಎಂದೂ ಇತರರ ಮಾತಿನಲ್ಲಿ ಗ್ವಾಡೆ ಎಂದು ಕಂಡು ಬರುತ್ತದೆ. ಕೆಲವು ಗಿರಿಜನರ ಭಾಷೆಯಲ್ಲಿ ಪುರಷರಾಡುವ ಭಾಷೆಗೂ ಕಿರಿಯರ ಭಾಷೆಗೂ ವ್ಯತ್ಯಾಸ ಕಂಡುಬರುತ್ತದೆ. ಆಯಾ ಕಸುಬಿಗೆ ತಕ್ಕಂತೆ ಜನರು ಮಾತಾಡುವ ರೀತಿಯೂ ಬೇರೆಯಾಗಿರುತ್ತದೆ. ಅಧ್ಯಾಪನ ವೃತ್ತಿಯವರ ಭಾಷೆಗೂ ವ್ಯಾಪಾರಗಾರರ ಭಾಷೆಗೂ ಭೇದವಿರುತ್ತದೆ. ಆಯಾ ವೃತ್ತಿಗೆ ಸೇರಿದ ಜನರು ತಮ್ಮ ನಿತ್ಯ ಜೀವನದಲ್ಲಿ ಭಾಷೆಯನ್ನು ಹೇಗೆ ಬಳಸಿಕೊಳ್ಳುತ್ತಾರೆಂಬುದು ಗಮನಾರ್ಹ. ಅಲ್ಲದೆ ಯಾವುದೇ ಸಮಾಜದಲ್ಲಿ ಒಂದು, ಎರಡು ಅಥವಾ ಹಲವು ಭಾಷೆಗಳನ್ನಾಡುವ ಜನರಿರಬಹುದು. ಬೇರೆ ಬೇರೆ ಭಾಷೆಗಳ ಪ್ರಭಾವಕ್ಕೊಳಗಾಗದ ಮಾತೃ ಭಾಷೆಗಳ ಪ್ರಭೇದಕ್ಕೂ ಇತರ ಭಾಷೆಗಳ ಪ್ರಭಾವ ಹೊಂದಿದ ಮಾತೃಭಾಷೆಯನ್ನಾಡುವವರ ಪ್ರಭೇದಕ್ಕೂ ವ್ಯತ್ಯಾಸ ಕಂಡು ಬರುತ್ತದೆ. ಸಮಾಜಕ್ಕೂ ಭಾಷೆಗೂ ಇರುವ ಸಂಬಂಧ, ಆ ಸಮಾಜ ಬದಲಾಣೆಯಾದಂತೆ ಭಾಷೆಯ ಮೇಲೆ ಅದರಿಂದಾಗುವ ಪ್ರಭಾವ ಹಾಗೂ ಪರಿಣಾಮ ಮುಂತಾದವು ಸಮಾಜಿಕ ಭಾಷಾವಿಜ್ಞಾನದ ಅಧ್ಯಯನ ವಿಷಯ.

2 ಮನೋಭಾಷಾವಿಜ್ಞಾನ : ಮನೋವಿಜ್ಞಾನ ಹಾಗೂ ಭಾಷಾವಿಜ್ಞಾನಗಳೆರಡರ ಸಹಯೋಗದಿಂದ, ಎರಡೂ ಶಾಸ್ತ್ರಪದ್ದತಿಗಳನ್ನೊಳಗೊಂಡ ಭಾಷಾ ವಿಜ್ಞಾನ ಪ್ರಭೇದವನ್ನು ಮನೋಭಾಷೆವಿಜ್ಞಾನವೆನ್ನಬಹುದು. ಭಾಷೆಗೂ ಅದನ್ನಾಡುವವರ ನಡವಳಿಕೆ, ವ್ಯವಹಾರಕ್ಕೂ ಇರುವ ಸಂಬಂಧವನ್ನು ಇಲ್ಲಿ ಅಭ್ಯಾಸ ಮಾಡುತ್ತೇವೆ. ತನ್ನ ಸುತ್ತಮುತ್ತಲಿನ ಹಿರಿಯರಾಡುವ ಮಾತುಗಳನ್ನು ಕೇಳಿಸಿಕೊಂಡು ಮಕ್ಕಳು ಭಾಷೆಯನ್ನು ಹೇಗೆ ಗ್ರಹಿಸುತ್ತಾರೆ, ಕೇಳಿದ ಹಲವಾರು ವಾಕ್ಯಗಳ ಆಧಾರಮೇಲೆ ಆ ಭಾಷೆಗೆ ಸಂಬಂಧಿಸಿದ ವ್ಯಾಕರಣವನ್ನು ಹೇಗೆ ರಚಿಸಿಕೊಳ್ಳುತ್ತಾರೆ. ಹೀಗೆ ರೂಪಿಸಿಕೊಂಡ ಭಾಷೆಯ ಮೇಲಣ ತಮ್ಮ ಸಾಮಥ್ರ್ಯವನ್ನು. ತಾವಾಡುವ ಮಾತುಗಳಿಂದ ಹೇಗೆ ವ್ಯಕ್ತಪಡಿಸುತ್ತಾರೆ ಇತ್ಯಾದಿ ವಿಚಾರಗಳು ಮನೋಭಾಷಾವಿಜ್ಞಾನದ ಅಧ್ಯಯನವಸ್ತು. ಭಾಷೆಯನ್ನು ಕಲಿಯಲು ಬೇಕಾದ ಅಂಗಗಳ ವೈಕಲ್ಯವಿಲ್ಲದಿರುವಾಗ ಮಾತೃಭಾಷೆಯನ್ನು ಕಲಿತುಕೊಳ್ಳಲಾರದ ಮಕ್ಕಳೇ ಇಲ್ಲವೆನ್ನಬಹುದು. ಮಾನವ ಶಿಶುವಿಗೆ ಯಾವುದೇ ಭಾಷೆಯನ್ನಾದರೂ ಕಲಿಯುವ ವಿಶೇಷ ಸಾಮಥ್ರ್ಯ ಹುಟ್ಟಿನಿಂದಲೇ ಬರುತ್ತದೆಂದೂ ಯಾವ ಭಾಷೆಯನ್ನು ಮಾತೃಭಾಷೆಯಾಗಿ ಕಲಿಯುತ್ತದೆಂಬುದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆಂದೂ ಹೇಳಬಹುದು. ಪ್ರಪಂಚದ ಭಾಷೆಗಳಿಗೆಲ್ಲ ಸಾಮಾನ್ಯವಾದ ವ್ಯಾಕರಣವೊಂದುಂಟೆಂದೂ ಅದರಿಂದಾಗಿಯೇ ಯಾವ ಭಾಷೆಯನ್ನಾದರೂ ಕಲಿಯಬಹದೆಂದೂ ಈ ಸಾಮಾನ್ಯ ವ್ಯಾಕರಣದಿಂದ ಯಾವುದೇ ಭಾಷೆಗೆ ಸಂಬಂಧಿಸಿದ ವಿಶೇಷ ವ್ಯಾಕರಣವನ್ನು ರೂಪಿಸಿಕೊಳ್ಳುವುದು ಸಾಧ್ಯವಾಗುವುದೆಂದೂ ತಿಳಿದುಬಂದಿದೆ. ಭಾಷೆಯನ್ನು ಕಲಿತ ಅನಂತರ ಯಾವುದಾದರೂ ಕಾರಣದಿಂದ ಮಗು ಮಾತನಾಡುವ ಶಕ್ತಿಕಳೆದುಕೊಂಡರೆ. ಈ ಕಳೆದುಹೋಗುವ ಕ್ರಮ ಮಗು ಭಾಷೆಯನ್ನು ಕಲಿಯುವಾಗ ಗಮನಿಸಬಹುದಾದ ಕ್ರಮಕ್ಕೆ ವಿರುದ್ಧವಾಗಿರುತ್ತದೆ. ಉದಾಹರಣೆಗೆ, ಮಕ್ಕಳು ತಮ್ಮ ಭಾಷೆಯನ್ನು ಕಲಿಯುವಾಗ ಪ, ಮ (ಸ್ಪರ್ಶ) ಧ್ವನಿಗಳನ್ನು ಮೊದಲು ಕಲಿತುಕೊಳ್ಳುವುದೆಂದೂ ಅನಂತರ ರ, ಲ, (ಸ್ಪರ್ಶೇತರ) ಧ್ವನಿಗಳನ್ನು ಕಲಿತುಕೊಳ್ಳುವುದೆಂದೂ ಗಮನಿಸಲಾಗಿದೆ. ಭಾಷೆ ನಷ್ಟವಾಗುವ ಸ್ಥಿತಿಯ ಕೊನೆಯಲ್ಲಿ ಕಲಿತುಕೊಂಡ ಧ್ವನಿಗಳು ಮೊದಲೂ ಮೊಲಿಗೆ ಕಲಿತುಕೊಂಡ ಧ್ವನಿಗಳು ಕಡೆಯಲ್ಲೂ ನಷ್ಟವಾಗುತ್ತವೆನ್ನಬಹುದು.

ಭಾಷಾವಿಜ್ಞಾನದ ಪ್ರಯೋಜನಗಳು : ಭಾಷಾವಿಜ್ಞಾನ ಸಿದ್ಧಾಂತಗಳನ್ನು ಭಾಷಾಭೋಧನೆ, ಕೋಶರಚನೆ ಹಾಗೂ ಸಾಹಿತ್ಯ ವಿಮರ್ಶೆಯ ಕ್ಷೇತ್ರಗಳಲ್ಲಿ ಉಪಯೋಗಿಸಿಕೊಳ್ಳಬಹುದು. ಪರಭಾಷೆಯನ್ನು ಮುಖ್ಯವಾಗಿ ಆ ಭಾಷೆಯ ಹಾಗೂ ವಿದ್ಯಾರ್ಥಿಯ ಮಾತೃಭಾಷೆಯ ವ್ಯಾಕರಣಗಳ ಸಾದೃಶ್ಯ ಮತ್ತು ವೈದೃಶ್ಯಗಳಲ್ಲಿ ಅರಿತಿರಬೇಕು. ಮಾತೃಭಾಷೆಯಲ್ಲಿಲ್ಲದ ಧ್ವನಿಗಳಾವುವು. ಅನ್ಯಭಾಷೆಯಲ್ಲಿ ಕಂಡುಬರುವ ಆ ಧ್ವನಿಗಳನ್ನು ಕಲಿಸುವುದು ಹೇಗೆ, ಎಂಬ ವಿಚಾರವನ್ನು ತಿಳಿದುಕೊಂಡಿರಬೇಕು. ಭಾಷೆಯ ಬಗ್ಗೆ ಒಳ್ಳೆಯ ಶಿಕ್ಷಣ, ಭಾಷೆಯಿಂದಲೇ ನಡೆಯಬೇಕು. ಭಾಷೆಯ ಮುಖ್ಯ ಉಪಯೋಗ ಪರಸ್ಪರ ಸಂವಾದಕ್ಕಾಗಿರುವುದರಿಂದ ಭಾಷಾಶಿಕ್ಷಣದಲ್ಲಿ ಮೊದಲಿಗೆ ಆ ಭಾಷೆಯಲ್ಲಿ ಮಾತಾಡುವುದನ್ನು ಕಲಿಸಬೇಕು. ತರುವಾಯ ಆ ಭಾಷೆಯಲ್ಲಿ ಓದುವುದನ್ನೂ ಬರೆಯುವುದನ್ನೂ ಕಲಿಸಬೇಕು. ಭಾಷೆಯಲ್ಲಿ ಭೌಗೋಳಿಕ, ಸಾಮಾಜಿಕ ಹಾಗೂ ಚಾರಿತ್ರಿಕ ಪ್ರಭೇದಗಳಿರುವುದರಿಂದ ಯಾವ ಪ್ರಭೇದವನ್ನು ಕಲಿಸಬೇಕೆಂಬುದನ್ನು ನಿರ್ಣಯಿಸಬೇಕು. ಭಾಷೆಗಳಲ್ಲಿ ಸಾಹಿತ್ಯಕಭಾಷೆ, ವ್ಯಾವಹಾರಿಕ ಭಾಷೆಯೆಂಬ ವ್ಯತ್ಯಾಸವಿರುವುದರಿಂದ ಅವುಗಳಲ್ಲಿ ಯಾವ ಪ್ರಭೇದಕ್ಕೆ ಯಾವ ಪರಿಸರಗಳಲ್ಲಿ ಪ್ರಾಧಾನ್ಯ ನೀಡಬೇಕೆಂಬುದನ್ನು ನಿಶ್ಚಯಿಸಬೇಕು. ಯಾವುದು ಶಿಷ್ಟಭಾಷೆ (ಸ್ಟ್ಯಾಂಡರ್ಡ್ ಲಾಂಗ್ವೇಜ್) ಯಾವುದು ಗ್ರಾಮ್ಯಭಾಷೆ (ಕಲೋಕ್ವಿಯಲ್) ಇವುಗಳ ಪೈಕಿ ಯಾವುದನ್ನು ಕಲಿಸಬೇಕು ಎಂಬುದರ ನಿರ್ಣಯ ಕೂಡ ಅಗತ್ಯ. ಒಂದೇ ತರಗತಿಯಲ್ಲಿ ಸಮಾಜದ ಬೇರೆ ಬೇರೆ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿದ್ದರಂತೂ ಈ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಅವರ ವ್ಯಕ್ತಿನಿರ್ಮಾಣ ವಾಕ್ಯಗಳಲ್ಲಿ ವ್ಯತ್ಯಾಸವಿರಲು ಸಾಧ್ಯ. ಒಂದೇ ಸಂದರ್ಭದಲ್ಲಿ ಅವರು ಉಪಯೋಗಿಸುವ ಪದಗಳು ಪರಸ್ಪರ ಬೇರೆಯಾಗಿರಬಹುದು. ಈ ರೀತಿಯ ವಿದ್ಯಾರ್ಥಿಗಳೆಲ್ಲರನ್ನೂ ಒಂದೇ ತರಗತಿಯಲ್ಲಿ ಸೇರಿಸಿ ಆಧ್ಯಾಪನ ಮಾಡಬಹುದೇ ಕೊಡದೇ ಕೊಡದೇ ಎಂಬುದನ್ನು ವಿಮರ್ಶಿಸಬೇಕು. ಭಾಷೆಯ ಧ್ವನಿರಚನೆ, ವಾಕ್ಯರಚನೆಗಳಲ್ಲಿ ಸರಳ ಹಾಗೂ ಸಂಕೀರ್ಣ ಅಂಶಗಳಿರಬಹುದು. ಆದ್ದರಿಂದ ಧ್ವನಿಗಳನ್ನು ಕಲಿಸುವ ಕ್ರಮ ಯಾವುದು, ಅವನ್ನು ಭೋಧಿಸಲು ಉಪಯೋಗಿಸುವ ಪದಗಳು ಯಾವುವಾಗಿರಬೇಕು ಮುಂತಾದ ವಿಷಯಗಳನ್ನು ನಿರ್ಧರಿಸಬೇಕು. ವಾಕ್ಯರಚನೆಯಲ್ಲೂ ಸಾಮಾನ್ಯವಾಕ್ಯಗಳ ರಚನೆಯನ್ನು ಅನಂತರ ಬೋಧಿಸಬೇಕು. ಈ ಎಲ್ಲ ಹಂತಗಳಲ್ಲಿ ಭಾಷಾವಿಜ್ಞಾನಿ ಹಾಗೂ ಅವನ ಅಧ್ಯಯನದ ತಿಳಿವಳಿಕೆ, ಅನುಭವ, ಸಿದ್ಧಾಂತಗಳು ಬಹಳಮಟ್ಟಿಗೆ ಉಪಯೋಗಕ್ಕೆ ಬರುತ್ತವೆ.
ಒಂದು ಭಾಷೆಯ ಸಾಹಿತ್ಯವನ್ನು ಇನ್ನೊಂದು ಭಾಷೆಗೆ ಅನುವಾದ ಮಾಡುವುದು ಸುಲಭದ ಕೆಲಸವಲ್ಲ. ಈ ಕಾರ್ಯದಲ್ಲಿ ತೊಡಗಿದವರು ಆ ಎರಡೂ ಭಾಷೆಗಳ ರಚನೆಯನ್ನು ಚೆನ್ನಾಗಿ ತಿಳಿದಿರಬೇಕು. ಒಂದು ಭಾಷೆಯ ವ್ಯಕ್ತ ನಿರ್ಮಾಣ ವಾಕ್ಯದಲ್ಲಿ ಕಂಡುಬರುವ ಪ್ರತಿಪದವನ್ನೂ ಇನ್ನೊಂದು ಭಾಷೆಯ ವಾಕ್ಯದಲ್ಲಿ ಅನುವಾದಿಸಲು ಸಾಧ್ಯವಿಲ್ಲವೆನ್ನುವ ಅಂಶವನ್ನೂ ಅಲ್ಲಿ ಉಪಯೋಗವಾದ ಪದಗಳ ಅರ್ಥವ್ಯಾಪ್ತಿಯೇನು ಎಂಬುದನ್ನೂ ಅರಿತಿರಬೇಕು. ಭಾಷೆ ಸಮಾಜವನ್ನು ಪ್ರತಿಬಿಂಬಿಸುವುದರಿಂದ ಆ ಎರಡೂ ಭಾಷೆಗಳನ್ನಾಡುವ ಜನರ ಸಂಸ್ಕøತಿ, ಸಮಾಜದಲ್ಲಿಯ ಪದ್ಧತಿಗಳು, ಇತ್ಯಾದಿ ವಿವರಗಳನ್ನು ತಿಳಿದುಕೊಂಡಿರ ಬೇಕು.
ಉತ್ತಮಕೋಶ ರಚನೆಗೆ ಭಾಷಾವಿಜ್ಞಾನಿಗಳ ನೆರವು ಅಗತ್ಯವಾಗಿ ಬೇಕಾಗುತ್ತದೆ. ಬೇರೆ ಬೇರೆ ಕಾಲಕ್ಕೆ ಸೇರಿದ ಸಾಹಿತ್ಯಗ್ರಂಥಗಳಲ್ಲಿ ಬಳಕೆಯಾಗುವ ಪದಗಳ ಅರ್ಥವ್ಯಾಪ್ತಿಯನ್ನು ತಿಳಿದುಕೊಂಡು ಅವನ್ನು ವಿಶ್ಲೇಷಿಸಿ ಚಾರಿತ್ರಿಕ ಕೋಶವನ್ನು ರಚಿಸಬಹುದು. ಒಂದು ಶತಮಾನದಿಂದ ಮತ್ತೊಂದು ಶತಮಾನದ ವೇಳೆಗೆ ಭಾಷೆಯಲ್ಲಿಯ ಶಬ್ಧಭಂಡಾರ ಹೇಗೆ ವ್ಯತ್ಯಾಸಗೊಂಡಿದೆ, ಅವುಗಳಲ್ಲಿ ಯಾವರೀತಿಯ ಅರ್ಥ ಬದಲಾವಣೆಗಯಾಗಿದೆ ಎಂಬ ವಿಚಾರ ಈ ಚಾರಿತ್ರಿಕ ಕೋಶಗಳಿಂದ ತಿಳಿಯುತ್ತದೆ. ಈ ರೀತಿಯ ಕೋಶಗಳೇ ಅಲ್ಲದೆ, ಬೇರೆ ಕ್ರಮದ ಕೋಶಗಳ ಕೂಡ ಸಾಧ್ಯ. ಉದಾಹರಣೆಗೆ, ಪದಾದಿಯಲ್ಲಿಯ ಧ್ವನಿಕ್ರಮವನ್ನು ಅನುಸರಿಸಿ ಸಾಮಾನ್ಯವಾಗಿ ಕೋಶಗಳ ರಚನೆ ನಡೆದಿರುವುದು ಕಂಡು ಬರುತ್ತವೆ. ಪದಾಂತ್ಯದಲ್ಲಿರುವ ಧ್ವನಿಗಳ ಕ್ರಮವನ್ನು ಅನುಸರಿಸಿ ಕೋಶರಚನೆ ಮಾಡಿದರೆ ಸಂಸ್ಕøತದಂಥ ಭಾಷೆಗಳಲ್ಲಿ ಪದಾಂತ್ಯದಲ್ಲಿ ತೋರಿಬರುವ ಪ್ರತ್ಯಯಗಳ ತಿಳಿವಳಿಕೆಗೆ ಅನುಕೂಲವಾಗುತ್ತದೆ. ಉಚ್ಚ ಅವರ್ತಾಂಕವನ್ನು (ಹೈಫ್ರೀಕ್ವೆನ್ಸಿ) ಅಧರಿಸಿ ಶಬ್ದಗಳನ್ನು ಜೋಡಿಸಿದರೆ ಭಾಷೆಯಲ್ಲಿ ಯಾವ ಪದ ಸಾಮಾನ್ಯ. ಯಾವ ಪದ ಅಪರೂಪವೆನ್ನುವುದು ತಿಳಿಯುತ್ತದೆ. ಪಠ್ಯಪುಸ್ತಕಗಳ ರಚನೆಗೆ ಇದು ಅವಶ್ಯಕ. ಶಬ್ದಗಳಿಗೆ ಅರ್ಥವನ್ನು ತಿಳಿಸುವ ಕೋಶಗಳಿರುವಂತೆ, ಅರ್ಥಗಳಿಗೆ ಶಬ್ದಗಳನ್ನು ತಿಳಿಸುವ ಕೋಶ ರಚನೆ ಸಹ ಸಾಧ್ಯ. ಈ ರೀತಿಯ ಕೋಶಗಳಿಂದ ಬರಹಗಾರರಿಗೆ ಬಹಳ ಪ್ರಯೋಜನವಾಗುತ್ತದೆ.

ಸಾಹಿತ್ಯಕ ಹಾಗೂ ವ್ಯಾವಹಾರಿಕ ಭಾಷೆಗಳ ಶೈಲಿಯನ್ನು ಕುರಿತಾದ ಅಧ್ಯಯನವೂ ಹೆಚ್ಚು ಉಪಯುಕ್ತವಾಗುತ್ತದೆ. ಕೆಲವೊಮ್ಮೆ ಶೈಲಿಯ ಅಧಾರದ ಮೇಲೆಯೇ, ಚರ್ಚಾಸ್ಪದವಾದ ಗ್ರಂಥಗಳ ಕರ್ತೃ ಹಾಗೂ ಕಾಲ ನಿರ್ಣಯ ಸಾಧ್ಯವಾಗುತ್ತದೆ.

ಭಾಷೆಯಾವುದು, ಉಪಭಾಷೆಯಾವುದು, ಭಾಷೆಗಳ ಭೌಗೋಳಿಕ ಪರಿಮಿತಿ ಏನು, ಆಡಳಿತಕ್ಕಾಗಿ ಯಾವ ಭಾಷೆಯನ್ನು ನಿಶ್ವಯಿಸಿಕೊಳ್ಳಬಹುದು. ಹಾಗೆ ನಿಶ್ಚಯಿಸಿದ ಭಾಷೆಯ ಪ್ರಸಾರದ ಕ್ರಮವೇನು ಮುಂತಾದ ಸಮಸ್ಯೆಗಳಿಗೆ ಭಾಷಾ ವಿಜ್ಞಾನದ ನೆರವನ್ನು ಪಡೆಯಬಹುದು. ಭಾಷಾವಿಜ್ಞಾನದ ದೃಷ್ಟಿಯಿಂದ ಪರಿಶೀಲಿಸಿ ಭಾಷೆಯ ಹೆಸರಿಗಲ್ಲಾಗಬಹುದಾದ ಅನೇಕ ಗೊಂದಲಗಳನ್ನು ನಿವಾರಿಸಬಹುದು. ಮಾನವನ ವಿಶಿಷ್ಟತೆಗೆ ಭಾಷೆಯೇ ಮುಖ್ಯ ಕಾರಣವಾದುದರಿಂದ ಸಮಾಜಶಾಸ್ತ್ರ ಹಾಗೂ ಮಾನವಶಾಸ್ತ್ರಗಳಲ್ಲಿ ಭಾಷಾವಿಜ್ಞಾನದ ಸ್ಥಾನ ಹೆಚ್ಚಿನದು. ಮಾನವ ಮಾನವನನ್ನು ಸರಿಯಾಗಿ ಅರಿಯುವ ಪ್ರಯತ್ನದಲ್ಲಿ ಹೆಚ್ಚಿನ ಸಫಲತೆ ಗಳಿಸಬೇಕಾದರೆ ಭಾಷಾವಿಜ್ಞಾನದ ನೆರವು ಅತ್ಯಗತ್ಯ. 						
	(ಎಚ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ